ಅಥಣಿ: ‘ಹಿಂದುಳಿದ ವರ್ಗದ ಪ್ರಬಲ ನಾಯಕ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದರೆ, ಅವರನ್ನು ನಂಬಿರುವ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಆರ್ಎಸ್ಪಿ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಹಳಷ್ಟು ಜನರು ಮಾಜಿ ಆಗಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಮಾಜಿ ಆಗಬೇಕು ಎಂಬುದನ್ನು ಅಂತಿಮವಾಗಿ ರಾಜ್ಯದ ಜನರೇ ನಿರ್ಧರಿಸುತ್ತಾರೆ’ ಎಂದು ‘2028ಕ್ಕೂ ನಾನೇ ಮುಖ್ಯಮಂತ್ರಿ’ ಎಂದ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಮೊದಲು ಬಳಸುತ್ತಿದ್ದ ಭಾಷೆಗೂ, ಈಗ ಬಳಸುತ್ತಿರುವ ಭಾಷೆಗೂ ಇರುವ ವ್ಯತ್ಯಾಸವನ್ನು ಜನರೇ ತುಲನೆ ಮಾಡಿಕೊಳ್ಳಲಿ ಎಂದರು.
‘ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿ ವೇದಿಕೆಯಲ್ಲಿ ಭೇಟಿಯಾದಾಗ ಅದು ಬಿಜೆಪಿ ಅಥವಾ ಕಾಂಗ್ರೆಸ್ ವಿಚಾರವಾಗುವುದಿಲ್ಲ. ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಸೌಹಾರ್ದಯುತವಾಗಿ ಮಾತನಾಡಿ ಉತ್ತಮ ಸಂದೇಶ ನೀಡಬೇಕು. ಮಾತನಾಡದಿದ್ದರೂ ಅಪಮಾನ ಮಾಡಿದರು ಎಂಬ ಟೀಕೆಗಳು ಕೇಳಿಬರುತ್ತವೆ’ ಎಂದರು.
ಸಿದ್ದರಾಮಯ್ಯ ನಮ್ಮ ಪಕ್ಷಗಳು ಬೇರೆಯಾಗಿದ್ದರೂ ಅವರೊಂದಿಗಿನ ನಮ್ಮ ವೈಯಕ್ತಿಕ ಸಂಬಂಧ ಉತ್ತಮವಾಗಿದೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ನಮ್ಮ ನಾಯಕರೇ. ಅವರೊಂದಿಗೆ ಖಾಸಗಿಯಾಗಿ ಭೇಟಿಯಾಗಿದ್ದೇನೆ, ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
‘ಅಧಿವೇಶನದ ಬಳಿಕ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಸಿದ್ಧತೆ ಆರಂಭಿಸಲಾಗಿದೆ. ಶೀಘ್ರದಲ್ಲೇ ಎರಡೂ ಕ್ಷೇತ್ರಗಳ ಕಾರ್ಯಕರ್ತರ ಬೃಹತ್ ಸಭೆ ಕರೆಯಲಾಗುವುದು. ನಮ್ಮ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿದ್ದಾರೆ’ ಎಂದರು.
ಈ ವೇಳೆ ಮಾಜಿ ಸಚಿವ ಶ್ರೀಮಂತ ಪಾಟೀಲ, ಬಿಜೆಪಿ ಮಂಡಳ ಅದ್ಯಕ್ಷ ಗಿರೀಶ ಬುಟಾಳಿ, ಮುಖಂಡರಾದ ಸಿದ್ದಪ್ಪಾ ಮುದಕ್ಕಣ್ಣವರ,ಸತ್ಯಪ್ಪಾ ಬಾಗೆನ್ನವರ, ರವಿ ಪೂಜಾರಿ, ಸಿದ್ದು ಪಾಟೀಲ, ಶಿವು ಸಿಂದೂರ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.
ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮೊದಲ ದಿನದಿಂದಲೂ ನಡೆಯುತ್ತಿದೆ. ಶೀಘ್ರದಲ್ಲೇ ಈ ಕುರಿತು ಒಳ್ಳೆಯ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ ರಮೇಶ ಜಾರಕಿಹೊಳಿ, ಶಾಸಕ
261121-21-2129004923

