ಬೆಂಗಳೂರು: ಪೊಲೀಸ್‌ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಸಲು ಅವಕಾಶ ಕೊಡಬಾರದು. ಆ ರೀತಿಯ ದೂರುಗಳು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ವಿಧಾನಸೌಧದ ನವೀಕರಿಸಿದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ, ಹಲವು ಸಲಹೆ–ಸೂಚನೆಗಳನ್ನು ನೀಡಿದ್ದೇನೆ. ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡಬೇಕೆಂದೂ ಎಚ್ಚರಿಕೆ ನೀಡಿದ್ದೇನೆ’ ಎಂದು ಹೇಳಿದರು.

‘ಸಂಚಾರ ದಟ್ಟಣೆ ಸಮಸ್ಯೆ, ಅಪರಾಧ ಪ್ರಕರಣಗಳು, ಸೈಬರ್‌ ಅಪರಾಧ ಪ್ರಕರಣಗಳು, ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಹೇಳಿಕೆ ನೀಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಉತ್ತಮ ಕಾನೂನು ಸುವ್ಯವಸ್ಥೆಗೆ ಪೊಲೀಸರು ಸಹಕಾರ ಕೊಡಬೇಕು. ಪೊಲೀಸ್‌ ಇಲಾಖೆಯಲ್ಲಿ ಆಂತರಿಕವಾಗಿ ಜಗಳಕ್ಕೆ ಅವಕಾಶ ಇಲ್ಲ. ಶಿಸ್ತು ಪಾಲನೆ ಮಾಡಬೇಕು ಎಂದು ಮಾರ್ಗದರ್ಶನ ಕೊಟ್ಟಿದ್ದೇನೆ’ ಎಂದರು.

‘ಡ್ರಗ್ಸ್‌ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಪಣ ತೊಟ್ಟಿದೆ. ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಬಿಬಿಎಂಪಿಯನ್ನು ವಿಭಜಿಸಿ ಜಿಬಿಎ ಮಾಡಿದಾಗ ಆರಂಭದಲ್ಲಿ ಕೆಲವು ಕಡೆಯಿಂದ ಅಪಸ್ವರಗಳು ಬಂದಿದ್ದವು. ಆದರೆ, ಈಗ ಜಿಬಿಎ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಪೊಲೀಸ್ ಕಮಿಷನರೇಟ್‌ಗಳು ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು.

‘ರೌಡಿಗಳಲ್ಲಿ ಭಯ ಇರಬೇಕು. ಖಾಕಿ ಬಟ್ಟೆಗೆ ಪ್ರತಿಯೊಬ್ಬರೂ ಗೌರವ ನೀಡುವಂತೆ ಕರ್ತವ್ಯ ನಿರ್ವಹಿಸಬೇಕು. ಯಾರಿಗೆ ರಕ್ಷಣೆ ನೀಡಬೇಕೊ ಅವರಿಗೆ ರಕ್ಷಣೆಯನ್ನು ಖಾತರಿ ಪಡಿಸಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಪೊಲೀಸರು ನಾಗರಿಕ ಸ್ನೇಹಿಯಾಗಿರಬೇಕು. ಸುಳ್ಳು ಸುದ್ದಿಗಳ ವಿರುದ್ಧ, ದ್ವೇಷ ಭಾಷಣಗಳ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಶಕ್ತಿಗಳ ಮೇಲೆ ನಿರಂತರ ನಿಗಾ ಇರಿಸಬೇಕು’ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿ, ‘ಡ್ರಗ್ಸ್ ದಂಧೆ, ರೌಡಿಗಳ ನಡುವಿನ ಹೊಡೆದಾಟ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜನರಲ್ಲಿ ಸುರಕ್ಷತೆಯ ವಾತಾವರಣ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಹಾಗೂ ಪೊಲೀಸ್ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ನಗರ ಪೊಲೀಸ್ ಮುಖ್ಯ ಕಮಿಷನರ್‌ ಆರ್.ಹಿತೇಂದ್ರ, ಸಂಚಾರ ವಿಭಾಗದ ಕಮಿಷನರ್ ಹೇಮಂತ್‌ ನಿಂಬಾಳ್ಕರ್‌ ಪಾಲ್ಗೊಂಡಿದ್ದರು.

‘ಅಕ್ರಮ ಚಟುವಟಿಕೆ ಮಟ್ಟ ಹಾಕಿ’

‘ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪೊಲೀಸಿಂಗ್ ಎಲ್ಲೆಡೆ ಕಾಣುವಂತಿರಬೇಕು. ರಾತ್ರಿ ಗಸ್ತು ಹೆಚ್ಚಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಇಡೀ ರಾಜ್ಯದ ಪೊಲೀಸ್ ಅಧಿಕಾರಿಗಳೊಂದಿಗೆ ಸದ್ಯದಲ್ಲಿಯೇ ಇನ್ನೊಂದು ಸಭೆ ನಡೆಸುತ್ತೇನೆ. ನಿಮ್ಮಿಂದ ಉತ್ತಮ ಫಲಿತಾಂಶವನ್ನು ಬಯಸುತ್ತೇನೆ. ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಜನರಿಗೆ ಫಲಿತಾಂಶ ಕಾಣುವಂತೆ ಕಾರ್ಯ ನಿರ್ವಹಿಸಿ’ ಎಂದು ಮುಖ್ಯಮಂತ್ರಿ ಹೇಳಿದರು.

ಜಾತಿ ಸಂಘರ್ಷಕ್ಕೆ ಪ್ರಚೋದನೆ ಬೇಡ

‘ಬಸವಣ್ಣನವರ ವಿಚಾರದಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಈ ಬಗ್ಗೆ ಉಪಮುಖ್ಯಮಂತ್ರಿ ಈಗಾಗಲೇ ಸಚಿವ ಸಂಪುಟ ಸಭೆಯ ತೀರ್ಮಾನ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಯಾವುದೇ ಸಮುದಾಯದ ವಿರುದ್ಧವೂ ನಡೆದುಕೊಳ್ಳುವುದಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಅಧಿಕಾರಿಗಳಿಗೆ ಸೂಚನೆಗಳು

ನಾಗರಿಕರ ರಕ್ಷಣೆ, ಆರ್ಥಿಕ ಅಪರಾಧ ಪ್ರಕರಣಗಳ ನಿಯಂತ್ರಣ ಮಾಡಬೇಕು. ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಇರಬೇಕು‌

ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

ನಗರವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿಡುವ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ. ಮಹಿಳೆಯರು, ಮಕ್ಕಳು, ಸಾಮಾನ್ಯ ಜನರಿಗೆ ಯಾವುದೇ ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಿಸಬೇಕು

ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

ಬದಲಾಗುತ್ತಿರುವ ಅಗತ್ಯತೆಗಳಿಗೆ ಅನುಗುಣವಾಗಿ ನಗರದ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು

ಪ್ರಿಯಾಂಕ್‌ ಖರ್ಗೆ, ಗೃಹ ಸಚಿವ

261121-4-256522483