ಬೆಂಗಳೂರು: ಮೈಸೂರಿನ ಮಹಾರಾಜ ಮೈದಾನದಲ್ಲಿ ನ. 26ರಂದು ನಡೆಯಲಿರುವ ಸಂವಿಧಾನ ದಿನವನ್ನು ದೊಡ್ಡಮಟ್ಟದಲ್ಲಿ, ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಸಮಾಜಕಲ್ಯಾಣ ಸಚಿವ ಕೆ.ಎಚ್‌. ಮುನಿಯಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ರೇಷ್ಮೆ ಸಚಿವ ಪುಟ್ಟರಂಗ ಶೆಟ್ಟಿ, ಅಲೆಮಾರಿ ನಿಗಮದ ಅಧ್ಯಕ್ಷರಾದ ಪಲ್ಲವಿ ಸೇರಿದಂತೆ ಹಲವರು ಭಾಗವಹಿಸಿ, ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸಿದರು.

ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಮುನಿಯಪ್ಪ, ‘ಸಂವಿಧಾನದ ದಿನಾಚರಣೆಯನ್ನು ದೊಡ್ಡಮಟ್ಟದ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಂವಿಧಾನದ ಮಹತ್ವ ಕುರಿತು ಜನರಿಗೆ ಅರಿವು ಮೂಡಿಸಲು ಹತ್ತುಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

‘ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸುವ ಯುವ ಸಂಸತ್‌ನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಿಂದ ಆಯ್ಕೆ ಆದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಲಾತಂಡಗಳು, ಎಲ್‌ಇಡಿ ವಾಹನದಲ್ಲಿ ಸಂವಿಧಾನ ಕುರಿತು ಮಾಹಿತಿ ಬಿತ್ತರಿಸುವ ಮೂಲಕ ಸಂವಿಧಾನದ ಮಹತ್ವ ಸಾರಲಾಗುವುದು, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ನೃತ್ಯ ತಂಡಗಳ ಮೂಲಕ ಪ್ರದರ್ಶಿಸಲಾಗುವುದು’ ಎಂದರು.

ವಕೀಲರ ತಂಡಗಳು ಸಂವಿಧಾನದ ಕಾನೂನುಗಳ ಮಾಹಿತಿ ಒದಗಿಸಲಿವೆ. ಜಿಲ್ಲಾಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆ ಮಾರ್ಗದರ್ಶನ ಮಾಡಲಿವೆ. ಕೆ.ಎಚ್‌.ಮುನಿಯಪ್ಪ, ಸಮಾಜಕಲ್ಯಾಣ ಸಚಿವ

261121-4-736517832