ನವದೆಹಲಿ: ಆ್ಯಪ್ ಆಧಾರಿತ ಬೈಕ್ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ, ಓಲಾ, ಊಬರ್ ಮತ್ತು ರ್ಯಾಪಿಡೊದಂತಹ ಸಂಸ್ಥೆಗಳು ನಿಯಂತ್ರಕ ಮಾನದಂಡಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಲು ನ್ಯಾಯಪೀಠ ಅನುವು ಮಾಡಿಕೊಟ್ಟಿದೆ.
‘ಸಮರ್ಪಕ ನಿಯಂತ್ರಣ ಚೌಕಟ್ಟಿನ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದ್ದಾಗ, ಸಂಪೂರ್ಣ ನಿಷೇಧದ ಅಗತ್ಯ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ಎನ್.ಕೋಟೀಶ್ವರ್ ಸಿಂಗ್ ಮತ್ತು ಸತೀಶ್ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
‘ಜಿಪಿಎಸ್ ವ್ಯವಸ್ಥೆ ಇರುವುದರಿಂದ ಬೈಕ್ ಟ್ಯಾಕ್ಸಿಯು ಯುವತಿಯರಿಗೆ ಸುರಕ್ಷಿತವಾಗಿದೆ. ಅದನ್ನು ನಿಷೇಧಿಸುವುದಕ್ಕಿಂತ ನಿಯಂತ್ರಿಸುವುದು ಉತ್ತಮ’ ಎಂದು ನ್ಯಾಯಮೂರ್ತಿ ಶರ್ಮಾ ಅಭಿಪ್ರಾಯಪಟ್ಟರು.
ವಿಚಾರಣೆಯ ಸಮಯದಲ್ಲಿ, ಸಂಚಾರ ದಟ್ಟಣೆ ಬಗ್ಗೆ ರಾಜ್ಯ ಸರ್ಕಾರ ವ್ಯಕ್ತಪಡಿಸಿದ ಕಳವಳವನ್ನು ನ್ಯಾಯಪೀಠ ಪ್ರಶ್ನಿಸಿತು. ಕಾರುಗಳಿಗಿಂತ ಮೋಟರ್ ಸೈಕಲ್ಗಳು ರಸ್ತೆಯ ಕಡಿಮೆ ಜಾಗ ಆಕ್ರಮಿಸಿಕೊಳ್ಳುತ್ತವೆ ಎಂಬುದನ್ನು ಪೀಠ ಗಮನಿಸಿತು.
‘ಅರ್ಹ ಮೋಟರ್ ಸೈಕಲ್ಗಳನ್ನು ಬೈಕ್ಟ್ಯಾಕ್ಸಿಗಳನ್ನಾಗಿ ಬಳಸಬಹುದು’ ಎಂದು ಹೈಕೋರ್ಟ್ ವಿಭಾಗೀಯ ಪೀಠ ಜನವರಿ 23ರಂದು ಮಹತ್ವದ ಆದೇಶ ನೀಡಿತ್ತು. ಈ ಆದೇಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.
‘ಬೈಕ್ಟ್ಯಾಕ್ಸಿ ಸೇವೆಗೆ ಬಳಸುವ ಮೋಟರ್ ಸೈಕಲ್ಗಳು, ಮೋಟರು ವಾಹನ ಕಾಯ್ದೆ– 1988ರ ಅಡಿಯಲ್ಲಿ ಸಾರಿಗೆ ವಾಹನಗಳ ವ್ಯಾಖ್ಯಾನಕ್ಕೆ ಒಳಪಡುತ್ತವೆ’ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು. ‘ಕಾನೂನಿನ ಪ್ರಕಾರ ಅರ್ಜಿಗಳನ್ನು ಸಲ್ಲಿಸಿದ ನಂತರ ಅರ್ಹ ಮೋಟರ್ ಸೈಕಲ್ಗಳಿಗೆ 1988ರ ಮೋಟರು ವಾಹನ ಕಾಯ್ದೆಯ ಕಲಂ 74ರ ಅಡಿಯಲ್ಲಿ ಒಪ್ಪಂದದ ಸಾಗಣೆ ಪರವಾನಗಿ ನೀಡಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿತ್ತು.
‘ಮೋಟರು ವಾಹನ ಕಾಯ್ದೆ– 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ’ ಎಂದು, ಅದಕ್ಕೆ ಮುನ್ನ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅದರ ವಿರುದ್ಧ ಸೇವಾದಾತ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಿದ್ದವು.
ಬೈರತಿ ಸುರೇಶ್, ಸಾರಿಗೆ ಸಚಿವಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗುತ್ತದೆ. ಆದಾಗ್ಯೂ, ಈ ಕುರಿತು ಅಡ್ವೊಕೇಟ್ ಜನರಲ್ ಅವರೊಂದಿಗೆ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೈಕ್ಟ್ಯಾಕ್ಸಿಗಳನ್ನು ನಿಷೇಧಿಸುವ ಬದಲು ಅನೇಕ ನಿಯಮಗಳನ್ನು ರೂಪಿಸಿ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ನಿಯಮ ರೂಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೈಕ್ಟ್ಯಾಕ್ಸಿ ಚಲಾಯಿಸುವವರ ದಾಖಲೆಗಳು, ಜಿಪಿಎಸ್ ಅಳವಡಿಕೆ, ವಾಹನಕ್ಕೆ ವಿಮೆ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.ಸಂಭಾಷಣೆ ಸ್ಮರಿಸಿದ ನ್ಯಾಯಮೂರ್ತಿ
ತೀರ್ಪನ್ನು ಪ್ರಕಟಿಸುವಾಗ, ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಅವರು ತಮ್ಮ ಕಚೇರಿ ಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಬೈಕ್ಟ್ಯಾಕ್ಸಿಯನ್ನು ಬಳಸುತ್ತಿದ್ದ ಯುವತಿಯೊಂದಿಗೆ ತಾವು ನಡೆಸಿದ್ದ ಸಂಭಾಷಣೆಯೊಂದನ್ನು ನೆನಪಿಸಿಕೊಂಡರು.
‘ನಾನು ಆಕೆಯನ್ನು ‘ನೀವು ನನ್ನ ಕಚೇರಿಗೆ ಹೇಗೆ ಬರುತ್ತೀರಿ?’ ಎಂದು ಕೇಳಿದೆ. ಅದಕ್ಕೆ ಆಕೆ, ‘ಟ್ಯಾಕ್ಸಿ ಬಾಡಿಗೆಗೆ ಪಡೆಯಲು ನನ್ನ ಬಳಿ ಹಣವಿಲ್ಲ, ಹಾಗಾಗಿ, ಮೋಟರ್ ಬೈಕ್ನಲ್ಲಿ ಬರುತ್ತೇನೆ’ ಎಂದು ಹೇಳಿದರು. ‘ಆಟೊದಲ್ಲಿ ಬರಬಹುದಲ್ಲ’ ಎಂದು ಪ್ರಶ್ನಿಸಿದೆ. ಆಗ ಆಕೆ, ‘ಸರ್, ಅದಕ್ಕೆ ಐದು ಪಟ್ಟು ಹೆಚ್ಚು ಬಾಡಿಗೆ ತೆರಬೇಕಾ
ಗುತ್ತದೆ’ ಎಂದಿದ್ದರು’ ಎಂದು ನ್ಯಾಯಮೂರ್ತಿ ಶರ್ಮಾ ತಿಳಿಸಿದರು.

