ಬೆಂಗಳೂರು: ‘ಬಸವಣ್ಣನವರಿಗೆ ಅಪಮಾನ ಮಾಡಿರುವ ‘ಬಸವ ಮಂಟಪ’ ಕೃತಿಯ ಹಿಂದೆ ಯಾರೇ ಇದ್ದರೂ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಎಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಮಾಡಲಾಗಿದೆ. ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇವೆ’ ಎಂದರು.

‘ಬಸವಣ್ಣನವರಿಗೆ ಮಾಡಿರುವ ಅಪಮಾನವು ಕರ್ನಾಟಕಕ್ಕೆ ತೋರಿದ ಅಗೌರವವೂ ಹೌದು. ಬಸವಣ್ಣ ಅವರನ್ನು ನಾವು ಸಾಂಸ್ಕೃತಿಕ ನಾಯಕ ಎಂದು ಸ್ವೀಕರಿಸಿ, ಗೌರವಿಸುತ್ತಿದ್ದೇವೆ. ಅವರ ಆಚಾರ–ವಿಚಾರ ತತ್ವಾದರ್ಶಗಳನ್ನು ನಮ್ಮ ಸರ್ಕಾರ ಅನುಸರಿಸುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇಡೀ ದೇಶಕ್ಕೆ ಮಾದರಿಯಾದ ಬಸವಣ್ಣನವರಿಗೆ ಅಪಮಾನ ಮಾಡುವುದನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

‘ದೆಹಲಿ, ವಿದೇಶಗಳಲ್ಲಿ ಬಸವಣ್ಣನವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಪ್ರತಿಯೊಂದು ಊರು, ಶಾಲೆ, ಮನೆ ಮತ್ತು ಕಚೇರಿಗಳಲ್ಲಿ ಅವರ ತತ್ವಾದರ್ಶಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಹೀಗಿರುವಾಗ, ಜಾತಿ ಹೆಸರಿನಲ್ಲಿ ಸಮಾಜದಲ್ಲಿ ಪರಸ್ಪರ ವೈಷಮ್ಯ ಮೂಡಿಸುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮತ್ತು ಕೆಲವು ಮಾಧ್ಯಮಗಳು ಮಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದರು.

‘ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ಬಸವ ಸಮಿತಿಯವರೂ ಈ ಬಗ್ಗೆ ನನಗೆ ಪತ್ರ ಬರೆದಿದ್ದರು. ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ, ಶರಣಪ್ರಕಾಶ ಪಾಟೀಲ, ಬಸವರಾಜ ರಾಯರಡ್ಡಿ, ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ ಸೇರಿ ಎಲ್ಲ ಸಚಿವರೂ ಈ ಬಗ್ಗೆ ಚರ್ಚಿಸಿದ್ದಾರೆ. ಪುಸ್ತಕದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆದು, ಶಾಂತಿಗೆ ಧಕ್ಕೆಯಾಗುವ ಅಪಾಯವಿದ್ದ ಕಾರಣ ತಕ್ಷಣವೇ ಮುಟ್ಟುಗೋಲಿಗೆ ನಿರ್ಧಾರ ಮಾಡಲಾಯಿತು’ ಎಂದು ವಿವರಿಸಿದರು.

ಶಂಕರ ಬಿದರಿ ವಜಾಕ್ಕೆ ಒತ್ತಾಯ

‘ಬಸವ ಮಂಟಪ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೃತಿಯನ್ನು ಹೊಗಳಿದ ಮತ್ತು ಕೃತಿಕಾರರಿಗೆ ಅಭಿನಂದನೆ ಸಲ್ಲಿಸಿದ ಶಂಕರ ಬಿದರಿ ಅವರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಮಹಾಸಭಾದ ಸದಸ್ಯರು ಒತ್ತಾಯಿಸಿದ್ದಾರೆ. ಮಹಾಸಭಾದ ಉಪಪೋಷಕ ಸದಸ್ಯ ಎಂ.ಟಿ.ಸುಭಾಷ್‌ಚಂದ್ರ ಅವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ‘ಶಂಕರ ಬಿದರಿ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾಸಭಾದ ಪರವಾಗಿ ಕೃತಿಕಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವೈಯಕ್ತಿಕ ವಿಶ್ವಾಸಕ್ಕೆ ಕಟ್ಟುಬಿದ್ದು ಮಹಾಸಭಾದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರಿಂದ ಮಹಾಸಭಾಗೆ ಹಾನಿಯೇ ಆಗುತ್ತಿದೆ’ ಎಂದು ದೂರಿದ್ದಾರೆ. ‘ಶಂಕರ ಬಿದರಿ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡರೆ ಸಾಲದು. ಕೃತಿಯಲ್ಲಿನ ಲೇಖನಗಳನ್ನು ಅಂಕಣಗಳಾಗಿ ಪ್ರಕಟಿಸಿದ್ದ ಪತ್ರಿಕೆ ಮತ್ತು ಅದರ ಸಂಪಾದಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.