ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ 4,828 ಕೆರೆಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 11,671 ಎಕರೆ ತೆರವಿಗೆ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯ ಬಳಿಕ ಮಾತನಾಡಿದ ಅವರು, ‘5,927 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 32,504 ಕೆರೆಗಳಿವೆ. 11,498 ಕೆರೆಗಳ 26,873 ಎಕರೆ ಒತ್ತುವರಿಯಾಗಿತ್ತು. ಈ ಪೈಕಿ 6,670 ಕೆರೆಗಳ 15,201 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಕೆರೆಗಳ ಒತ್ತುವರಿ ತೆರವಿಗೆ ಕಾರ್ಯಪಡೆ ರಚಿಸಲಾಗುತ್ತಿದೆ’ ಎಂದರು.
‘ಗ್ರಾಮೀಣ ಕೆರೆಗಳ ಒತ್ತುವರಿ ತೆರವು ಮಾಡಿ, ಕೆರೆ ಹೂಳು ತೆಗೆದು, ರಾಜಕಾಲುವೆಗಳ ಮತ್ತು ಮಳೆ ನೀರು ಕಾಲುವೆಗಳ ಅಡೆತಡೆ ನಿವಾರಿಸಿದರೆ ಮಳೆಗಾಲದಲ್ಲಿ ಕೆರೆಗಳು ತುಂಬುತ್ತವೆ. ಅಂತರ್ಜಲಮಟ್ಟವೂ ಹೆಚ್ಚಳವಾಗುತ್ತದೆ’ ಎಂದು ಹೇಳಿದರು.
1 ಸಾವಿರ ಬಸ್ ತಂಗುದಾಣ ನಿರ್ಮಾಣ: ವಿಬಿ ಜಿ ರಾಮ್ ಜಿ ಅಡಿ ಗ್ರಾಮೀಣ ಭಾಗದಲ್ಲಿ 1 ಸಾವಿರ ಬಸ್ ತಂಗುದಾಣ ನಿರ್ಮಿಸಲು ಯೋಜನೆ ರೂಪಿಸಿಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
‘ಪ್ರಯಾಣಿಕರು ಹೆಚ್ಚಿನ ಬಂದು ಹೋಗುವ ಬಸ್ ನಿಲುಗಡೆ ಸ್ಥಳಗಳನ್ನು ಗುರುತಿಸಿ, ತಂಗುದಾಣಗಳ ನಿರ್ಮಾಣ ಮಾಡಲಾಗುವುದು. ಅತಿ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಲಾಗುವುದು’ ಎಂದರು.
‘ವಿ ಬಿಜಿ ರಾಮ್ ಜಿ ಯೋಜನೆಯಲ್ಲಿ ಈಗಾಗಲೇ 2.68 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಪ್ರತಿ ನಿತ್ಯ ಸರಾಸರಿ ಎರಡೂವರೆ ಲಕ್ಷ ಕುಶಲ ಕಾರ್ಮಿಕರು ಕೆಲಸ ಮಾಡುತ್ತಿದ್ದು, ತೀವ್ರ ಬರ ಪರಿಸ್ಥಿತಿಯ ಸಮಯದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

