ತೋವಿನಕೆರೆ (ತುಮಕೂರು): ತೆಂಗಿನ ಚಿಪ್ಪಿನ ದರ ತೀವ್ರ ಕುಸಿದಿದ್ದು, ತೆಂಗು ಬೆಳೆಗಾರರು ಮತ್ತು ಚಿಪ್ಪು ಮಾರಾಟಗಾರರು ನಿರಾಸೆಗೊಂಡಿದ್ದಾರೆ. ಹೊರದೇಶದಿಂದ ಇದ್ದಿಲು (ಆ್ಯಕ್ಟಿವೇಟೆಡ್ ಕಾರ್ಬನ್) ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿರುವುದೇ ಕುಸಿತಕ್ಕೆ ಕಾರಣವಾಗಿದೆ.
ಇದೇ ವರ್ಷ ಜುಲೈನಲ್ಲಿ ತೋವಿನಕೆರೆ ಗ್ರಾಮದ ರೈತ ಟಿ.ಎ.ಲೋಕೇಶ್ ಅವರು ಟನ್ಗೆ ₹35 ಸಾವಿರದಂತೆ ಚಿಪ್ಪು ಮಾರಾಟ ಮಾಡಿ ಗಮನ ಸೆಳೆದಿದ್ದರು. ಈಗ, ತೋವಿನಕೆರೆ ಕಾಂತರಾಜು ಅವರು 478 ಕೆ.ಜಿ ಚಿಪ್ಪನ್ನು ಕೆ.ಜಿ.ಗೆ ₹18ರಂತೆ ಮಾರಾಟ ಮಾಡಿದ್ದಾರೆ. ನಾಲ್ಕು ತಿಂಗಳಲ್ಲಿ ಚಿಪ್ಪಿನ ಬೆಲೆ ದಿಢೀರ್ ಕುಸಿದಿದ್ದು, ಟನ್ ₹18 ಸಾವಿರಕ್ಕೆ ಬಂದು ನಿಂತಿದೆ.
‘ರಾಜ್ಯದ ಕೊಬ್ಬರಿ ಚಿಪ್ಪಿನಿಂದ ತಯಾರಿಸಿದ ಇದ್ದಿಲು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ಕೆ.ಜಿ.ಗೆ ₹105 ಇದೆ. ಈಗ ಫಿಲಿಪ್ಪಿನ್ಸ್, ಇಂಡೋನೇಷ್ಯಾದಿಂದ ಆಮದಾಗುತ್ತಿರುವ ಇದ್ದಿಲು ಕೆ.ಜಿ ₹65ಕ್ಕೆ ಸಿಗುತ್ತಿದೆ. ವಿದೇಶದಿಂದ ಕಡಿಮೆ ಬೆಲೆಗೆ ಇದ್ದಿಲು ಸಿಗುತ್ತಿದ್ದು, ಸ್ಥಳೀಯವಾಗಿ ತಯಾರಾಗುವ ಇದ್ದಿಲಿಗೆ ಬೇಡಿಕೆ ಕುಸಿದು, ಚಿಪ್ಪಿನ ಬೆಲೆ ಕೂಡ ಇಳಿಕೆಯಾಗಿದೆ’ ಎಂದು ಎನ್.ಡಿ.ಎಸ್ ಟ್ರೇಡರ್ಸ್ ಮಾಲೀಕ ದೇವರಾಜು ತಿಳಿಸಿದ್ದಾರೆ.
‘ದೇಶದ ಆ್ಯಕ್ಟಿವೇಟೆಡ್ ಕಾರ್ಬನ್ ಉದ್ಯಮಕ್ಕೆ ಮುಂದಿನ ಆರು ತಿಂಗಳು ಮಹತ್ವದ್ದು. ಕಚ್ಚಾವಸ್ತುಗಳ ಬೆಲೆ ವ್ಯತ್ಯಾಸ ಹೀಗೆ ಮುಂದುವರಿದರೆ ಖರೀದಿದಾರರು ಇತರೆ ದೇಶಗಳನ್ನು ಅವಲಂಬಿಸುವ ಅಪಾಯ ಇದೆ. ಹಾಗಾಗಿ, ಉತ್ಪಾದನಾ ವೆಚ್ಚ ನಿಯಂತ್ರಣ ಆಗಬೇಕಿದೆ’ ಎನ್ನುತ್ತಾರೆ ಅವರು.
ರಾಜ್ಯದ ಇದ್ದಿಲಿಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಇದರಿಂದಾಗಿ ಚಿಪ್ಪು ಖರೀದಿಸಿ, ಇದ್ದಿಲು ಮಾಡುತ್ತಿದ್ದ ಉದ್ಯಮಿಗಳು ದೊಡ್ಡ ನಷ್ಟ ಅನುಭವಿಸುವಂತಾಗಿದೆ. ಬೆಲೆ ಹೆಚ್ಚಿದ್ದಾಗ ಬೀದಿಬೀದಿ ಸುತ್ತಿ ಚಿಪ್ಪು ಖರೀದಿಸಿದ್ದ ಮಧ್ಯವರ್ತಿಗಳು ಕೂಡ ನಷ್ಟ ಅನುಭವಿಸಿದ್ದಾರೆ.
‘ತಿಂಗಳ ಹಿಂದೆ ಚಿಪ್ಪು ತೆಗೆದುಕೊಂಡಾಗ ₹38 ಸಾವಿರಕ್ಕೆ ಮಾರಬಹುದು ಎಂದುಕೊಂಡಿದ್ದೆ. ಆದರೆ, ಈಗ ಟನ್ ಬೆಲೆ ₹18 ಸಾವಿರ ಎಂದಾಗ ಬೇಸರವಾಯಿತು. ಒಣಗಿದಷ್ಟು ತೂಕ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಅದೇ ಬೆಲೆಗೆ ಮಾರಾಟ ಮಾಡಿದೆ’ ಎಂದು ಮಧ್ಯವರ್ತಿಯೊಬ್ಬರು ಹೇಳಿದರು.

