ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಹಿಂಭಾಗದಲ್ಲಿ ಐತಿಹಾಸಿಕ ಅಶೋಕನ ಶಿಲಾ ಶಾಸನವಿದ್ದು, ಇದನ್ನು ನೋಡಲು ಬರುವ ಪ್ರವಾಸಿಗರು ಪ್ರಾಣವನ್ನು ಪಣಕ್ಕಿಡಬೇಕಾದ ಸ್ಥಿತಿ ಎದುರಾಗಿದೆ.

ಸಾಮ್ರಾಟ ಅಶೋಕನು ಬೌದ್ಧಧರ್ಮದ ಪ್ರಚಾರಕ್ಕೆ, ನ್ಯಾಯಯುತ ನಡೆತೆಗೆ, ಶಾಂತಿಗೆ ತನ್ನ ರಾಜ್ಯದ ಹಲವೆಡೆಯಲ್ಲಿ ಶಿಲಾಶಾಸನಗ ಳನ್ನು ಕೆತ್ತಿಸಿದ್ದು ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕೊಪ್ಪಳದಲ್ಲಿರುವ ಅಶೋಕನ ಶಾಸನದ ‌ವೀಕ್ಷಣೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಶಾಸನ ಇರುವ ಬೆಟ್ಟವನ್ನು ಏರಲು ಮೆಟ್ಟಲುಗಳ ವ್ಯವಸ್ಥೆಯಿಲ್ಲ. ಒಂದು ಪಾದ ಇಡುವಷ್ಟು ಸಣ್ಣ ಗುಂಡಿಗಳಿದ್ದು ಅವುಗಳನ್ನು ಹಿಡಿದುಕೊಂಡೇ ಮೇಲ್ಭಾಗಕ್ಕೆ ತೆರಳಬೇಕು. ಪ್ರಯಾಸಪಟ್ಟು ಬೆಟ್ಟದ ಮೇಲೆ ಹೋಗುವಾಗ ಸಾಕಷ್ಟು ಗಾಳಿಯೂ ಬೀಸುವುದರಿಂದ ಅಲ್ಪ ಆಯ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ.

ಕೇಂದ್ರ ಪುರಾತತ್ವ ಇಲಾಖೆಯು ಶಾಸನದ ಮಹತ್ವವನ್ನು ವಿವರಿಸುವ ಫಲಕವನ್ನು ಅಳವಡಿಸಿ, ಒಬ್ಬ ಪ್ರವಾಸಿ ಸಿಬ್ಬಂದಿಯನ್ನು ನಿಯೋಜಿಸಿದ್ದು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ಬೆಟ್ಟ ಹತ್ತಲು ಸರಾಗವಾದ ವ್ಯವಸ್ಥೆ, ಕನಿಷ್ಠ ಒಂದು ದಪ್ಪನೆಯ ಹಗ್ಗದ ಸೌಲಭ್ಯವನ್ನಾದರೂ ಕಲ್ಪಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ಪ್ರವಾಸಿಗರು ಹೇಳುತ್ತಾರೆ.

ಈಗಾಗಲೇ ಶಾಸನ ಬಹುತೇಕ ಹಾಳಾಗುವ ಹಂತಕ್ಕೆ ಬಂದಿದ್ದು ಅಕ್ಷರಗಳು ಸರಿಯಾಗಿ ಕಾಣಿಸುತ್ತಿಲ್ಲ. ಇನ್ನಷ್ಟು ದಿನ ಕಳೆದರೆ ಪೂರ್ಣವಾಗಿ ದಾಖಲೆಯೇ ನಾಶವಾಗುವ ಆತಂಕ ಎದುರಾಗಿದೆ. ಆದ್ದರಿಂದ ಅದನ್ನು ರಕ್ಷಣೆ ಮಾಡಬೇಕು. ನೆರಳಿಗಾಗಿ ಗಾಜಿನ ಕವಚವನ್ನಾದರೂ ಹಾಕಿದರೆ ಜನ ಶಾಸನ ಮುಟ್ಟುವುದಾದರೂ ತಪ್ಪುತ್ತದೆ ಎಂದು ಇತಿಹಾಸ ಸಂಶೋಧಕ ಕೊಪ್ಪಳದ ಸಿದ್ಧಲಿಂಗಪ್ಪ ಕೋಟ್ನೇಕಲ್‌ ಹೇಳುತ್ತಾರೆ.

ಪಾಲ್ಕಿಗುಂಡು ಶಾಸನದ್ದೂ ಇದೇ ಸಮಸ್ಯೆ: ನಗರದ ಮಳೆಮಲ್ಲೇಶ್ವರ ಬೆಟ್ಟದ ಮೇಲ್ಭಾಗದಲ್ಲಿರುವ ಅಶೋಕನ ಮತ್ತೊಂದು ಶಾಸನವೂ ರಕ್ಷಣೆಯಿಲ್ಲದೇ ಹಾಳಾಗುತ್ತಿದೆ. ಎರಡು ದೊಡ್ಡ ಬಂಡೆಗಳ ಮೇಲೆ ಚಪ್ಪಟೆಯಾದ ಕಲ್ಲುಗಳ ಕೆಳಗೆ ಪಾಲ್ಕಿಗುಂಡು ಶಾಸನವಿದ್ದು, ಇದರ ಮೇಲೆಯೇ ಪ್ರವಾಸಿಗರು ಓಡಾಡಿ ಅಕ್ಷರಗಳೆಲ್ಲವೂ ಕಾಣಿಸದಂತಾಗಿವೆ. ಈ ಶಾಸನ ನೋಡಲು ತೆರಳುವ ಮಾರ್ಗವೂ ದುರ್ಗಮವಾಗಿದ್ದು ಸರ್ಕಾರ ಐತಿಹಾಸಿಕ ಶಾಸನಗಳನ್ನು ನೋಡಿಬರಲು ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಶಾಸನದ ಮೇಲಿರುವ ಅಕ್ಷರಗಳು ಮಾಸಿಹೋಗುತ್ತಿರುವುದು
ಶರಣಬಸಪ್ಪ ಕೋಲ್ಕಾರ ಇತಿಹಾಸ ಸಂಶೋಧಕಅಶೋಕನ ಶಾಸನಗಳು ಭಾರತದ ಇತಿಹಾಸದ ಜೊತೆ ನಂಟು ಹೊಂದಿದೆ. ಇಂಥ ಮಹತ್ವದ ಎರಡು ಶಾಸನಗಳು ಜಿಲ್ಲೆಯಲ್ಲಿರುವುದೇ ಹೆಮ್ಮೆ. ಅವುಗಳನ್ನು ಉಳಿಸಿಕೊಳ್ಳಲು ಭಾರತೀಯ ಪುರಾತತ್ವ ಇಲಾಖೆ ತ್ವರಿತ ಕ್ರಮ ವಹಿಸಬೇಕು.  ಕೆ. ರಾಮಕೃಷ್ಣ ರೆಡ್ಡಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕಕೊಪ್ಪಳದ ಗವಿಮಠದ ಹಿಂಭಾಗದಲ್ಲಿರುವ ಅಶೋಕನ ಶಾಸನ ನೋಡಲು ಬಹಳಷ್ಟು ಕಷ್ಟಪಡಬೇಕಾದ ಪರಿಸ್ಥಿತಿಯಿರುವುದು ಗಮನಕ್ಕೆ ಇದೆ. ಅದರ ರಕ್ಷಣೆ ಮತ್ತು ಸುಲಭವಾಗಿ ನೋಡಲು ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು.