ಬೆಂಗಳೂರು: ‘ಕಾರ್ಮಿಕರ ಹೋರಾಟ ಹಿಂದೆಂದಿಗಿಂತ ಈಗ ಹೆಚ್ಚು ಅನಿವಾರ್ಯವಾಗಿದೆ. ಹೋರಾಡದೇ ಇದ್ದರೆ, ಕಾರ್ಮಿಕರು ಅವರ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸಿಪಿಐ ಮತ್ತು ಎಐಟಿಯುಸಿ ರಾಷ್ಟ್ರೀಯ ಕಾರ್ಯದರ್ಶಿ ಅಮರ್‌ಜೀತ್‌ ಕೌರ್‌ ಕಳವಳ ವ್ಯಕ್ತಪಡಿಸಿದರು.

ಎಐಟಿಯುಸಿಯು ನಗರದಲ್ಲಿ ಇದೇ ಭಾನುವಾರ ತನ್ನ 43ನೇ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ. ಸಮಾವೇಶದ ಭಾಗವಾಗಿ ಬೆಂಗಳೂರಿಗೆ ಬಂದಿರುವ ಅಮರ್‌ಜೀತ್‌ ಅವರು ದೇಶದ ರಾಜಕೀಯ ಮತ್ತು ಕಾರ್ಮಿಕ ಹಕ್ಕುಗಳ ಆಗುಹೋಗುಗಳನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

ಬ್ರಿಟಿಷ್‌ ಆಳ್ವಿಕೆಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ರೂಪಿಸಲಾದ ಕಾನೂನುಗಳನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇನ್ನಷ್ಟು ಸುಧಾರಣೆ ಮಾಡಲಾಗಿತ್ತು. ಸುಮಾರು 100 ವರ್ಷಗಳ ನಿರಂತರ ಹೋರಾಟದ ಫಲವಾಗಿ ರೂಪುಗೊಂಡಿದ್ದ ಹತ್ತಾರು ಕಾನೂನುಗಳನ್ನು ಕೇಂದ್ರದ ಎನ್‌ಡಿಎ ಸರ್ಕಾರವು ಅಳಿಸಿಹಾಕಿದೆ. ಕೇವಲ ಮೂರು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಈ ಸಂಹಿತೆಗಳು ಕಾರ್ಮಿಕರ ಪರವಾಗಿ ಇರದೆ, ಬಂಡವಾಳಶಾಹಿಗಳ ಪರವಾಗಿ ವಕಾಲತ್ತು ವಹಿಸುತ್ತವೆ. ಈ ಅಪಾಯವನ್ನು ಗ್ರಹಿಸುವಲ್ಲಿ ಕಾರ್ಮಿಕ ಸಂಘಟನೆಗಳು ವಿಫಲವಾದ ಕಾರಣ, ಈಗ ಬೀದಿಗಿಳಿಯಲೇಬೇಕಾದ ಅನಿವಾರ್ಯ ಎದುರಾಗಿದೆ.

ಕಾರ್ಮಿಕ ಸಂಹಿತೆಗಳು ಅಪಾಯಗಳನ್ನು ತಂದೊಡ್ಡಿವೆಯೇ?

ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಜನಸಂಘ, ಆನಂತರ ಬಿಜೆಪಿ ಎಂದಿಗೂ ಬಂಡವಾಳಶಾಹಿಗಳ ಪರವಾಗಿಯೇ ಇದ್ದದ್ದು. 2004ರಲ್ಲಿ ಮಾನ್ಯತೆ ಕಳೆದುಕೊಂಡಿದ್ದ ಎಸ್ಮಾವನ್ನು, 2015ರಲ್ಲಿ ಮತ್ತಷ್ಟು ಕಠಿಣರೂಪದಲ್ಲಿ ಮರುಜಾರಿ ಮಾಡಿದ್ದು ಮೋದಿ ಸರ್ಕಾರ. ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಕಾನೂನು ಇದು ಎಂದು ಮೇಲ್ನೋಟಕ್ಕೆ ಅನಿಸಿದರೂ, ಕಾರ್ಮಿಕ ಸಂಘಟನೆಗಳು ಮತ್ತು ಕಾರ್ಮಿಕರಲ್ಲಿ ಹೋರಾಟದ ಮನೋಭಾವವನ್ನೇ ಇದು ನಾಶಮಾಡಿದೆ. ಸರ್ಕಾರಿ ಉದ್ದಿಮೆಗಳಲ್ಲಿನ ಮೀಸಲಾತಿಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಹಿಂಬಾಗಿಲಿನ ಮೂಲಕ ತೆಗೆದುಹಾಕುತ್ತಿದೆ. ಖಾಸಗಿಯವರ ವಶಕ್ಕೆ ಹೋದ ತಕ್ಷಣ ನೇಮಕಾತಿಯಲ್ಲಿನ ಮೀಸಲಾತಿ ರದ್ದಾಗುತ್ತದೆ. ಐಡಿಬಿಐ ಬ್ಯಾಂಕ್‌ನ ಖಾಸಗೀಕರಣವು ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ. ಲಾಭದಲ್ಲಿರುವ ರಾಷ್ಟ್ರೀಯ ಸಂಸ್ಥೆಯೊಂದನ್ನು ಎನ್‌ಡಿಎ ಸರ್ಕಾರ ಖಾಸಗೀಕರಣ ಮಾಡಿದರೂ, ಅದರ ವಿರುದ್ಧ ಪ್ರಬಲವಾಗಿ ದನಿಯೆತ್ತಬಲ್ಲ ಕಾರ್ಮಿಕ ಹೋರಾಟ ರೂಪುಗೊಳ್ಳಲಿಲ್ಲ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು.

ಪ್ರಬಲ ಕಾರ್ಮಿಕ ಹೋರಾಟ ಮತ್ತೆ ಪುಟಿದೇಳಲಿದೆಯೇ?

ಈ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೋರಾಟವನ್ನು ವಿದ್ಯಾರ್ಥಿ ಸಂಘಟನೆಗಳು ಸರಿಯಾದ ಹಾದಿಯಲ್ಲಿ ಕರೆದೊಯ್ದು, ತಾರ್ಕಿಕ ಅಂತ್ಯ ಮುಟ್ಟಿಸಿದವು. ಆ ಹೋರಾಟವು ಕಾರ್ಮಿಕ ಸಂಘಟನೆಗಳಲ್ಲೂ ಹೊಸ ಹುಮ್ಮಸ್ಸು ತುಂಬಿದೆ. ಹೊಸ ತಲೆಮಾರಿನ ಜನರು ಹೋರಾಟದ ಸಾಧ್ಯತೆಗಳನ್ನು ಕಣ್ಣಾರೆ ಕಂಡಿದ್ದಾರೆ. ಹೋರಾಟದ ಅಗತ್ಯತೆ ಹಾಗೂ ರೂಪುರೇಷೆಗಳನ್ನೇ ಸಮ್ಮೇಳನದಲ್ಲಿ ಚರ್ಚಿಸಲಿದ್ದೇವೆ.

‘ವಿದೇಶಾಂಗ ನೀತಿಯೆಲ್ಲಿದೆ?’

‘ಸ್ವಾತಂತ್ರ್ಯಾನಂತರ ಭಾರತವು ಸಮಾಜವಾದವನ್ನು ಒಪ್ಪಿಕೊಂಡಿತ್ತು. ಹೀಗಿದ್ದೂ ಬಂಡವಾಳಶಾಹಿ ಮತ್ತು ಸಮಾಜವಾದಿ ರಾಷ್ಟ್ರಗಳ ಬಣವನ್ನು ಸೇರದೆ, ಅಲಿಪ್ತ ನೀತಿಯನ್ನು ಹುಟ್ಟುಹಾಕಿದ್ದು ಭಾರತ. ಆದರೆ, ಈಚಿನ ಒಂದು ದಶಕದಲ್ಲಿ ಭಾರತಕ್ಕೆ ಒಂದು ವಿದೇಶಾಂಗ ನೀತಿಯೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಮರ್‌ಜೀತ್‌ ಕೌರ್‌ ಹೇಳಿದರು.

‘ಭಾರತವು ಯಾವುದೇ ಯುದ್ಧದ ಸಂದರ್ಭದಲ್ಲಿ, ಯಾವುದೇ ಬಣವನ್ನು ಬೆಂಬಲಿಸಿಲ್ಲ. ಆದರೆ, ಈಗ ಗಾಜಾಪಟ್ಟಿಯಲ್ಲಿ ನರಮೇಧ ನಡೆಸಿದ ಇಸ್ರೇಲ್‌ ಅನ್ನು ‘ನಮ್ಮ ತಂದೆನಾಡು’ ಎಂದು ಕರೆಯುತ್ತಿದ್ದೇವೆ. ವಿದೇಶಾಂಗ ನೀತಿಯಲ್ಲಿನ ಅಧಃಪತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ’ ಎಂದರು.

‘ಎಡಪಕ್ಷಗಳು ದೇಶದಲ್ಲಿ ನೆಲೆ ಕಳೆದುಕೊಂಡಿಲ್ಲ’

‘ಸ್ವಾತಂತ್ರ್ಯಾನಂತರದ ಭಾರತದಲ್ಲಿ ಎಡಪಕ್ಷಗಳು ಅಧಿಕಾರದಲ್ಲಿ ಇಲ್ಲ ಎಂಬುದು ಸತ್ಯವಾದರೂ, ಎಡಪಕ್ಷಗಳ ಮತಬ್ಯಾಂಕ್‌ ನಾಶವಾಗಿಲ್ಲ. ವಿರೋಧ ಪಕ್ಷಗಳ ಸ್ಥಾನದಲ್ಲಿ ಇದ್ದೇ ಇದ್ದೇವೆ. ಧರ್ಮೇಂದ್ರ ಪ್ರಧಾನ್‌ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಎಲ್ಲ ವಿದ್ಯಾರ್ಥಿ ಸಂಘಟನೆಗಳು ಎಡಪಕ್ಷಗಳ ಸಂಘಟನೆಗಳೇ ಆಗಿವೆ’ ಎಂದು ಅಮರ್‌ಜೀತ್ ಕೌರ್ ಹೇಳಿದರು.‌

‘ಎಡಪಕ್ಷಗಳು ಈಗ ಮತ್ತೆ ಬಲಗೊಳ್ಳತ್ತಿವೆ. ಇದನ್ನು ಮನಗಂಡೇ ಮೋದಿ ಮತ್ತವರ ಪಟಾಲಂ ‘ಧಿಮಾಗಿ ನಕ್ಸಲರು’ ಎಂಬ ಹೊಸ ಸಂಕಥನವನ್ನು ಹುಟ್ಟುಹಾಕಿದೆ. ಎಡಪಕ್ಷಗಳನ್ನೇ ಗುರಿ ಮಾಡಿದ ಹುನ್ನಾರವಿದು’ ಎಂದು ಪ್ರತಿಪಾದಿಸಿದರು.

261121-51-920909811