ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಬುಧವಾರ ರಾತ್ರಿಯಿಂದಲೇ (ಅ. 4) ಹೊಸ ದರ ಜಾರಿಗೆ ಬರಲಿದೆ.
ಟಿಕೆಟ್ ದರವನ್ನು ಬೆಂಗಳೂರು ಬಿಎಂಟಿಸಿಯಲ್ಲಿ ಶೇ 35ರಷ್ಟು ಹಾಗೂ ಕೆಎಸ್‌ಆರ್‌ಟಿಸಿ ಸಹಿತ ಉಳಿದ ನಿಗಮಗಳಲ್ಲಿ ಶೇ 23ರಷ್ಟು ಏರಿಕೆ ಮಾಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು 2014ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು 2020ರಲ್ಲಿ ಹೆಚ್ಚಳ ಮಾಡಲಾಗಿತ್ತು. ಬಳಿಕ ಹಲವು ವರ್ಷ ಹೆಚ್ಚಳವಾಗಿರಲಿಲ್ಲ. ಆನಂತರ 2025ರ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಯಿತಾದರೂ ಅದರ ಪ್ರಮಾಣ ಶೇ 15ರಷ್ಟಿತ್ತು. ಒಂದು ವರ್ಷ ಹತ್ತು ತಿಂಗಳ ಒಳಗೆ ಮತ್ತೆ ಏರಿಕೆ ಮಾಡಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ದರ ಪರಿಷ್ಕರಣೆಯ ವಿವರ ನೀಡಿದರು.
‘ಬಿಎಂಟಿಸಿ ಸಾಮಾನ್ಯ ಬಸ್ ಪ್ರಯಾಣ ದರದಲ್ಲಿ ₹ 4ರಿಂದ ₹ 12ರವರೆಗೆ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ ಬಸ್‌ಗಳ ಪ್ರಯಾಣ ದರವನ್ನು ₹ 9ರಿಂದ 18ರವರೆಗೆ ಸ್ಟೇಜ್‌ಗಳಿಗೆ ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ’ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಏಳು ಬಾರಿ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. ಹೀಗೆ ಪ್ರತಿ ಲೀಟರ್‌ಗೆ ಒಟ್ಟು ₹ 10.47 ಹೆಚ್ಚಳವಾಗಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳು ತಮ್ಮ ಆದಾಯದಲ್ಲಿ ಶೇ 80ರಷ್ಟು ಹಣವನ್ನು ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಕ್ಕೆ ಭರಿಸುತ್ತಿವೆ. ಡೀಸೆಲ್‌ಗೆ ಪ್ರತಿದಿನಕ್ಕೆ ₹ 15.60 ಕೋಟಿಯಂತೆ ವಾರ್ಷಿಕ ₹ 5,694 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಆಗಿಂದಾಗ್ಗೆ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದರಿಂದ ಸಂಸ್ಥೆಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು.
ಡೀಸೆಲ್ ಬೆಲೆಯಲ್ಲಿ ಹೆಚ್ಚಳ, ಸಿಬ್ಬಂದಿ ವೇತನ ಪರಿಷ್ಕರಣೆ, ಬಿಡಿಭಾಗಗಳ ಬೆಲೆಯಲ್ಲಿ ಏರಿಕೆ ಮತ್ತು ಕಾಲಕಾಲಕ್ಕೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡದೇ ಇರುವುದರಿಂದ ನಾಲ್ಕೂ ಸಾರಿಗೆ ನಿಗಮಗಳು ಸುಮಾರು ₹ 10,200 ಕೋಟಿ ನಷ್ಟವನ್ನು ಅನುಭವಿಸುತ್ತಿವೆ ಎಂದರು.

‘ಶಕ್ತಿ’ಗೂ ದರ ಏರಿಕೆಗೂ ಸಂಬಂಧವಿಲ್ಲ
‘ಬಸ್ ಪ್ರಯಾಣ ದರ ಏರಿಕೆಗೂ ಶಕ್ತಿ ಯೋಜನೆಗೂ ಯಾವುದೇ ಸಂಬಂಧವಿಲ್ಲ’ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು. ‘ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ನಿತ್ಯ ಸರಾಸರಿ 1.24 ಕೋಟಿ ಪ್ರಯಾಣಿಕರು ಓಡಾಡುತ್ತಿದ್ದು ಶಕ್ತಿ ಯೋಜನೆಯ ಅನುಷ್ಠಾನದ ನಂತರ ಸರಾಸರಿ 74.40 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ತಗಲುತ್ತಿರುವ ವೆಚ್ಚವನ್ನು ಸರ್ಕಾರವು ಸಾರಿಗೆ ನಿಗಮಗಳಿಗೆ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ಯಾವುದೇ ನಷ್ಟವಾಗುತ್ತಿಲ್ಲ’ ಎಂದು ಹೇಳಿದರು. ‘ನಾವು ಬಸ್‌ಗೆ ನೀರು ತುಂಬಿಸುವಂತಿಲ್ಲ. ಡೀಸೆಲ್ ಹಾಕಲೇಬೇಕು. ಡೀಸೆಲ್ ದರ ಒಂದೇ ಸಮನೆ ಜಾಸ್ತಿಯಾಗಿರುವುದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಯಿತು’ ಎಂದು ಸಮರ್ಥಿಸಿಕೊಂಡರು.
ಶಿಫಾರಸಿಗಿಂತ ಕಡಿಮೆ ಹೆಚ್ಚಳ
ನಷ್ಟ ಸರಿದೂಗಿಸಬೇಕಿದ್ದರೆ ಎಷ್ಟು ಪ್ರಮಾಣದಲ್ಲಿ ಪ್ರಯಾಣ ದರ ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ನಿಗಮಗಳು ಸಲ್ಲಿಸಿದ್ದ ಬೇಡಿಕೆ ಹಾಗೂ ತಿವಾರಿ ಸಮಿತಿ ಶಿಫಾರಸು ಮಾಡಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ದರ ಹೆಚ್ಚಳವಾಗಿದೆ. ಕೆಎಸ್‌ಆರ್‌ಟಿಸಿ ಕೆಕೆಆರ್‌ಟಿಸಿ ಎನ್‌ಡಬ್ಲ್ಯುಆರ್‌ಟಿಸಿಗಳು ಶೇ 90ರಷ್ಟು ದರ ಏರಿಸಬೇಕು ಎಂದು ಬೇಡಿಕೆ ಇಟ್ಟಿದ್ದವು. ಬಿಎಂಟಿಸಿ ಶೇ 180ರಷ್ಟು ಹೆಚ್ಚಳ ಮಾಡಬೇಕು ಎಂದು ಹೇಳಿತ್ತು. ಇಂಧನ ದರ ಸಿಬ್ಬಂದಿ ವೇತನ ಬಸ್ ನಿರ್ವಹಣೆ ಸಹಿತ ಎಲ್ಲವನ್ನೂ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಪ್ರಯಾಣ ದರ ನಿಯಂತ್ರಣ ಸಮಿತಿ ಪರಿಶೀಲಿಸಿತ್ತು. ಬಿಎಂಟಿಸಿ ಪ್ರಯಾಣ ದರವನ್ನು ಶೇ 45ರಷ್ಟು ಹೆಚ್ಚಳ ಮಾಡಬಹುದು ಉಳಿದ ನಿಗಮಗಳಲ್ಲಿ ಶೇ 34ರಷ್ಟು ಹೆಚ್ಚಳ ಮಾಡಬಹುದು ಎಂದು ಶಿಫಾರಸು ಮಾಡಿತ್ತು.


