ಗುವಾಹಟಿ: ಈ ಬಾರಿ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಮತ್ತೊಂದು ಬೋನಸ್‌ ಅಂಕ ಸಂಪಾದಿಸಿದೆ. ಅಸ್ಸಾಂ ವಿರುದ್ಧ ಪಂದ್ಯದಲ್ಲಿ ರಾಜ್ಯ ತಂಡ ಇನ್ನಿಂಗ್ಸ್‌ ಹಾಗೂ 314 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, ಬೋನಸ್ ಸೇರಿ 7 ಅಂಕ ಗಳಿಸಿದೆ. ಒಟ್ಟಾರೆ ‘ಬಿ’ ಗುಂಪಿನಲ್ಲಿ ಆಡಿರುವ 4 ಪಂದ್ಯಗಳಲ್ಲಿ ತಂಡ 16 ಅಂಕ ಸಂಪಾದಿಸಿದ್ದು, ಅಗ್ರ-2ರಲ್ಲಿ ಸ್ಥಾನ ಪಡೆದಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಅಸ್ಸಾಂ ಕೇವಲ 135 ರನ್‌ಗೆ ಆಲೌಟಾಗಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯ ತಂಡ 6 ವಿಕೆಟ್‌ ನಷ್ಟದಲ್ಲಿ 577 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು. ಕೆ.ವಿ.ಅನೀಶ್‌ 145 ರನ್‌ಗೆ ಔಟಾಗದರೆ, ಮನ್ವಂತ್ ಕುಮಾರ್‌(108 ಎಸೆತಗಳಲ್ಲಿ ಔಟಾಗದೆ 100) ಮತ್ತೊಂದು ಶತಕದ ಮೂಲಕ ಗಮನಸೆಳೆದರು.

442 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಅಸ್ಸಾಂ, 40.2 ಓವರ್‌ಗಳಲ್ಲಿ ಕೇವಲ 128 ರನ್‌ಗೆ ಸರ್ವಪತನ ಕಂಡಿತು. ನಾಯಕ ಡೆನಿಸ್‌ ದಾಸ್‌ 50 ರನ್‌ ಸಿಡಿಸಿದರು. ರಾಜ್ಯದ ಪರ ನಾಯಕ ಶ್ರೇಯಸ್ ಗೋಪಾಲ್‌ 4, ಶಿಖರ್‌ ಶೆಟ್ಟಿ 3 ವಿಕೆಟ್‌ ಕಿತ್ತರು.

ಸ್ಕೋರ್‌: ಅಸ್ಸಾಂ 135/10 ಮತ್ತು 128/10 (ಡೆನಿಸ್‌ 50, ಶ್ರೇಯಸ್‌ 4-34, ಶಿಖರ್‌ 3-33), ಕರ್ನಾಟಕ 577/6 ಡಿಕ್ಲೇರ್‌(ಅನೀಶ್‌ 145, ಮನ್ವಂತ್‌ ಔಟಾಗದೆ 100, ರೋಶನ್ ಆಲಂ 3-176)

ಪಂದ್ಯಶ್ರೇಷ್ಠ: ಕೆ.ವಿ.ಅನೀಶ್‌

ಮಧ್ಯ ಪ್ರದೇಶಕ್ಕೆ ಇನ್ನಿಂಗ್ಸ್‌ ಸೋಲು!

ಮಾಜಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ವಿದರ್ಭ ಇನ್ನಿಂಗ್ಸ್‌ ಹಾಗೂ 20 ರನ್‌ ಗೆಲುವು ಸಾಧಿಸಿತು. ಮಧ್ಯಪ್ರದೇಶದ 209 ರನ್‌ಗೆ ಪ್ರತಿಯಾಗಿ ವಿದರ್ಭ 334 ರನ್‌ ಸಿಡಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಮ.ಪ್ರ. 105 ರನ್‌ಗೆ ಆಲೌಟಾಯಿತು. ಇನ್ನು, ಹರ್ಯಾಣ ವಿರುದ್ಧ ಉತ್ತರಾಖಂಡ 10 ವಿಕೆಟ್‌ನಿಂದ ಗೆದ್ದರೆ, ಬಿಹಾರ ವಿರುದ್ಧ ಗೋವಾ ಇನ್ನಿಂಗ್ಸ್‌ ಹಾಗೂ 177 ರನ್‌ಗಳಿಂದ ಜಯಗಳಿಸಿತು.

ಶುಭಾ, ನಿಕಿ ಸ್ಫೋಟಕ ಆಟ: ರಾಜ್ಯ ತಂಡಕ್ಕೆ ಸತತ ಆರನೇ ಗೆಲುವು

ಸೂರತ್‌: ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 6ನೇ ಪಂದ್ಯದಲ್ಲೂ ಗೆಲುವು ಸಾಧಿಸಿದ್ದು, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಬುಧವಾರ ರಾಜ್ಯ ತಂಡ ಛತ್ತೀಸ್‌ಗಢ ವಿರುದ್ಧ 52 ರನ್‌ಗಳಿಂದ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 191 ರನ್‌ ಕಲೆಹಾಕಿತು. ನಾಯಕಿ ಶುಭಾ ಸತೀಶ್ 49 ಎಸೆತಗಳಲ್ಲಿ 79, ನಿಕಿ ಪ್ರಸಾದ್‌ 38 ಎಸೆತಗಳಲ್ಲಿ 66 ರನ್‌ ಸಿಡಿಸಿದರು. ಶ್ರೇಯಾಂಕ ಪಾಟೀಲ್‌ 7 ಎಸೆತಗಳಲ್ಲಿ 18 ರನ್‌ ಬಾರಿಸಿದರು. ದೊಡ್ಡ ಗುರಿ ಬೆನ್ನತ್ತಿದ ಛತ್ತೀಸ್‌ಗಢ 19.5 ಓವರ್‌ಗಳಲ್ಲಿ 139 ರನ್‌ಗೆ ಆಲೌಟಾಯಿತು. ಮೋನಿಕಾ 4, ಅನನ್ಯ 3 ವಿಕೆಟ್‌ ಕಿತ್ತರು.