ಬೆಂಗಳೂರು: 'ಭಾರತದ ಆತ್ಮ ಹಳ್ಳಿಗಳಲ್ಲಿದೆ’ ಎಂಬ ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿಗೆ ಸ್ಟಿಂಗ್ ಆಪರೇಷನ್ ಕುರಿತು ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರು, ’ಎಚ್.ಡಿ.ಕುಮಾರಸ್ವಾಮಿ ಹಳ್ಳಿ ಗುಗ್ಗುನಾ? ನಾವೇನು ಬಿಗ್ ಬಾಸ್ ನಡೆಸ್ತಿದ್ದೀವಾ, ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡಕ್ಕೆ ಆಗುತ್ತಾ? ತನಿಖೆ ಮಕ್ಕಳ ಆಟವಲ್ಲ, ಅವರಿಂದ ನನಗೆ ಪ್ರಮಾಣಪತ್ರ ಅಗತ್ಯವಿಲ್ಲ, ಕಲಿಯುವುದು ಏನೂ ಇಲ್ಲ' ಎಂದು ಹೇಳಿದ್ದರು.

ಈ ಹೇಳಿಕೆ ಸಾಮಾಜಿಕ ಮಾಧ್ಯಮದ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ‘ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ’ ಎಂದಿದ್ದಾರೆ.

“ಭಾರತದ ಆತ್ಮ ಹಳ್ಳಿಗಳಲ್ಲಿದೆ.”
-ರಾಷ್ಟ್ರಪಿತ ಮಹಾತ್ಮ ಗಾಂಧಿ

ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.#ಹಳ್ಳಿಗರೆಂದರೆಗುಗ್ಗುಗಳಲ್ಲ

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 5, 2026

ಪ್ರಿಯಾಂಕ್ ಹೇಳಿದ್ದೇನು?

'ಗೃಹ ಇಲಾಖೆಗೆ ಪ್ರಿಯಾಂಕ್ ಖರ್ಗೆ ನಾಲಾಯಕ್' ಎಂಬ ಕುಮಾರಸ್ವಾಮಿಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, 'ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲವಾ? ಮಕ್ಕಳ ಆಟ ಆಡುತ್ತಿದ್ದಾರಾ? ಜನರು ನಿಮಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಪಾಲಿಟಿಕ್ಸ್‌ಗೆ ಒಂದು ಬಾರಿಯೂ 100 ಸೀಟು ಗೆಲ್ಲಲು ಆಗಲಿಲ್ಲ. ಚಿಕ್ಕ ಮಕ್ಕಳ ಹಾಗೆ ಮಾತನಾಡಿ ಘನತೆ ಕಳೆದುಕೊಂಡಿದ್ದಾರೆ' ಎಂದಿದ್ದರು.

'ವೈಯಕ್ತಿಕವಾಗಿ ಮಾತನಾಡೋದು ಬಿಟ್ಟು ತನಿಖೆ ಬಗ್ಗೆ ಮಾತನಾಡಲಿ. ದಾಖಲೆ ಇದ್ದರೆ ಕೊಡಲಿ. 2015ರಲ್ಲಿ ನಡೆದ ಘಟನೆ ಗೃಹ ಇಲಾಖೆಗೆ ಹೇಗೆ ಸಂಬಂಧಪಡುತ್ತದೆ. ಆಗ ಇವರೇ ಮುಖ್ಯಮಂತ್ರಿ ಆಗಿದ್ದರಲ್ವಾ? ಆಗ ಕತ್ತೆ ಕಾಯುತ್ತಿದ್ದರಾ? ಅವರಿಗೆ ಆವಾಗ ಗೊತ್ತಿರಲಿಲ್ವಾ, ವಿಲೇಜ್ ಈಡಿಯಟ್ ರೀತಿ ಆಡೋದು ಬಿಡಬೇಕು' ಎಂದು ಕಿಡಿಕಾರಿದ್ದರು.

ನಿಂದಕ ಮಂತ್ರಿ ಎಂದಿದ್ದ ಎಚ್‌ಡಿಕೆ

ಇದಕ್ಕೂ ಮೊದಲು ಕುಮಾರಸ್ವಾಮಿ ಅವರು, 'ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ. ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ' ಎಂದು ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.