ಕೋಲಾರ: ಕಾಂಗ್ರೆಸ್ಸಿಗರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯಬೇಕೆಂಬ ಹೇಳಿಕೆ ನೀಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಿಸುವಂತೆ ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಲಾರದಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಕೂಡಲೇ ಎಫ್ಐಆರ್ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ವ್ಯಕ್ತಿಯೊಬ್ಬರನ್ನು ಕತ್ತರಿಸುವುದಾಗಿ ಹೇಳಿಕೆ ನೀಡಿದರೆ ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಾಗುತ್ತದೆ ಹೇಳಿ? ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ಅವರ ವಿರುದ್ಧ ಕೊಲೆ ಬೆದರಿಕೆ ಹಾಗೂ ರಾಷ್ಟ್ರಪತಿ ಅಂಗಳದಲ್ಲಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ (ವಿದೇಯಕ 2025) ಕಾಯ್ದೆಯಡಿ ಕಠಿಣ ಮೊಕದ್ದಮೆ ಹೂಡಬೇಕು. ಈ ಸಂಬಂಧ ಠಾಣೆಯಲ್ಲಿ ಒಟ್ಟು 3 ದೂರುಗಳನ್ನು ನೀಡಲಾಗಿದೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಈಚೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇವರಿಬ್ಬರ ಮಾತುಗಳನ್ನು ಕೇಳಿದರೆ ನಿಜವಾದ ಅರಾಜಕತೆ ಬಿಜೆಪಿಯಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಕೆ.ವಿ.ಗೌತಮ್ ಮಾತನಾಡಿ, ‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆಯಲು ನಮ್ಮ ಹೋರಾಟ ಸಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪ ಮಾಡಿಕೊಂಡು ಬಿಜೆಪಿಗೆ ವೋಟು ಹಾಕದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಬಿಜೆಪಿ ಅಕ್ರಮ ಮತ್ತು ಮೋಸದಿಂದಲೇ ಚುನಾವಣೆ ಗೆಲ್ಲುತ್ತಿದೆಯೇ ಹೊರತು ನ್ಯಾಯಯುತವಾಗಿ ಗೆದ್ದಿಲ್ಲ. ತಾವು ಗೆಲ್ಲಲು ಇತರರನ್ನು ಸೋಲಿಸುವ ತಂತ್ರ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಸರ್ವಾಧಿಕಾರಿ ರಾಷ್ಟ್ರವನ್ನಾಗಿ ಮಾಡಲಾಗಿದೆ. ಬಿಜೆಪಿಗೆ ವೋಟ್ ಹಾಕದವರನ್ನು ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕುವ ಕೆಲಸ ನಡೆಯುತ್ತಿದೆ. ನೀಟ್ ಹಗರಣದ ವಿರುದ್ಧ ದೇಶದಲ್ಲಿ ಜೆನ್ ಝೀ ಬೃಹತ್ ಚಳವಳಿ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಶುರುವಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಫ್ಸರ್, ಜಿಲ್ಲಾ ಎಟ್ಟಿ ಘಟಕದ ಅಧ್ಯಕ್ಷ ಎನ್.ಅಂಬರೀಶ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಂಗೀತಾ, ಅನ್ವರ್ ಪಾಷ, ಖಾದ್ರಿಪುರ ಬಾಬು ಇದ್ದರು.
ಎಂ.ಎಲ್.ಅನಿಲ್ ಕುಮಾರ್ ವಿಧಾನ ಪರಿಷತ್ ಸದಸ್ಯನಾಲಿಗೆ ಹರಿಬಿಡುವ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಕೆ.ವಿ.ಗೌತಮ್ ಕೆಪಿಸಿಸಿ ಕಾರ್ಯದರ್ಶಿಮತದಾನದ ಹಕ್ಕು ಕೇಳುವುದರಲ್ಲಿ ತಪ್ಪೇನಿದೆ? ಇದು ಅರಾಜಕತೆ ಹೇಗೆ ಆಗುತ್ತದೆ? ಬಿಜೆಪಿಗೆ ವೋಟು ಹಾಕದವರನ್ನು ದೇಶದ್ರೋಹಿ ಎಂದು ಜೈಲಿಗೆ ಕಳಿಸುವ ಕೆಲಸ ನಡೆದಿದೆಛಲವಾದಿ ನಾರಾಯಣಸ್ವಾಮಿ ಇತ್ತೀಚಿನ ದಿನಗಳಲ್ಲಿ ನಾಲಿಗೆ ಹರಿಬಿಡುತ್ತಿದ್ದಾರೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಬಾಗಿಲಲ್ಲಿಯೇ ಸದಾ ಇರುತ್ತಿದ್ದರು. ಈಗ ಯಾರನ್ನೋ ಮೆಚ್ಚಿಸಲು ಈ ರೀತಿ ಬೇಜವಾಬ್ದಾರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಎಂ.ಎಲ್.ಅನಿಲ್ ಕುಮಾರ್ ಟೀಕಿಸಿದರು. ಬಿಜೆಪಿಯವರು ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ? ಕಾಂಗ್ರೆಸ್ ವಿರುದ್ಧವೋ ಕೇಂದ್ರ ಸರ್ಕಾರದ ವಿರುದ್ಧವೋ ಎಂದು ಪ್ರಶ್ನಿಸಿದರು.ಖರ್ಗೆ ಮನೆ ಬಾಗಿಲಲ್ಲಿ ನಿಲ್ಲುತ್ತಿದ್ದರುಬ್ಯಾಲೆಟ್ ಪೇಪರ್ನಲ್ಲಿ ಲೋಕಸಭೆ ಚುನಾವಣೆ ನಡೆಸಿ
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇಳುವುದು ತಪ್ಪೇ? ಬ್ಯಾಲೆಟ್ ಪೇಪರ್ನಲ್ಲಿ ಲೋಕಸಭಾ ಚುನಾವಣೆ ನಡೆಸಿ ಎಂದು ಆಗ್ರಹಿಸುವುದರಲ್ಲಿ ತಪ್ಪೇನಿದೆ? ಇದರಲ್ಲಿ ಅರಾಜಕತೆ ಎಲ್ಲಿದೆ? 2024ರ ಲೋಕಸಭಾ ಚುನಾವಣೆಯ ಅಕ್ರಮಗಳ ಸರಣಿ ಬಹಿರಂಗವಾಗಿದ್ದು ಧೈರ್ಯವಿದ್ದರೆ ಬ್ಯಾಲೆಟ್ ಪೇಪರ್ ಮೂಲಕವೇ ಲೋಕಸಭೆಗೆ ಮರು ಚುನಾವಣೆ ನಡೆಸಲಿ ಎಂದು ಎಂ.ಎಲ್.ಅನಿಲ್ ಕುಮಾರ್ ಹಾಗೂ ಕೆ.ವಿ.ಗೌತಮ್ ಸವಾಲು ಹಾಕಿದರು. ಕೇಂದ್ರ ತನಿಖಾ ಸಂಸ್ಥೆ ಇ.ಡಿ ನಡೆಸುತ್ತಿರುವ ಶೇ 90ರಷ್ಟು ದಾಳಿಗಳು ವಿರೋಧ ಪಕ್ಷಗಳ ನಾಯಕರ ಮೇಲೆಯೇ ನಡೆಯುತ್ತಿವೆ ಎಂದರು.

