ಬೆಂಗಳೂರು: ‘ಕೆಪಿಎಸ್ಸಿ ವಿರುದ್ಧ ಹೈಕೋರ್ಟ್ ಆದೇಶಿಸಿರುವ ತನಿಖೆ ಪೂರ್ಣಗೊಳ್ಳುವವರೆಗೆ 2026–27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 319 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕು’ ಎಂದು ರಾಜ್ಯ ದಲಿತ ಪದವೀಧರರ ಸಂಘದ ಅಧ್ಯಕ್ಷ ಲೋಕೇಶ್ ವಿ. ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘319 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲೇಬೇಕು ಎಂದಾದರೆ, ಜಂಟಿ ರಾಜ್ಯ ಲೋಕಸೇವಾ ಆಯೋಗದ ಮೂಲಕ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಬೇಕು. ಜಂಟಿ ಆಯೋಗವನ್ನು ರಚಿಸಲು ಸಂವಿಧಾನದ ವಿಧಿ 315 (2) ಅವಕಾಶ ನೀಡಿದೆ’ ಎಂದು ಹೇಳಿದರು.
‘ಕೆಪಿಎಸ್ಸಿ ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮತ್ತು ಕೆಲವು ಸದಸ್ಯರು ಅಕ್ರಮ ಎಸಗಿರುವುದು ಸಾಬೀತಾಗಿದೆ. ನೇಮಕಾತಿಗಾಗಿ ಲಂಚ ಪಡೆದಿರುವ ಆರೋಪಗಳು ದೃಢಪಟ್ಟಿವೆ. ಹಿಂದಿನ ಪರೀಕ್ಷಾ ನಿಯಂತ್ರಕ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಕೂಡಾ ಅಧಿಕಾರ ದುರುಪಯೋಗಪಡಿಸಿಕೊಂಡು ಜೈಲುಸೇರಿದ್ದಾರೆ. ಭ್ರಷ್ಟಾಚಾರದಿಂದ ನಲುಗಿರುವ ಈ ಸಂಸ್ಥೆಯ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
‘ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ನೇಮಕಾತಿ ಹಗರಣದಲ್ಲಿ ಭಾಗಿಯಾದ ಸದಸ್ಯರನ್ನು ಕಾನೂನಿನ ಪ್ರಕಾರ ವಜಾಗೊಳಿಸುವವರೆಗೂ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ನಡೆಸಬಾರದು’ ಎಂದು ಒತ್ತಾಯಿಸಿದ ಅವರು, ‘ಅಭ್ಯರ್ಥಿಯೊಬ್ಬ ಅಕ್ರಮದಲ್ಲಿ ಭಾಗಿಯಾದರೆ ಆತ ಜೀವನ ಪರ್ಯಂತ ಕೆಪಿಎಸ್ಸಿ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ತೆಗೆದುಕೊಳ್ಳಲು ಅವಕಾಶ ಇಲ್ಲ. ಆದರೆ, ಕೆಪಿಎಸ್ಸಿ ಸದಸ್ಯರು ಮತ್ತು ಅಧಿಕಾರಿಗಳು ದುರ್ನಡತೆ ತೋರಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಅವರ ವಿರುದ್ಧ ಶಿಸ್ತುಕ್ರಮ ಯಾಕೆ ತೆಗೆದುಕೊಳ್ಳುವುದಿಲ್ಲ’ ಎಂದು ಪ್ರಶ್ನಿಸಿದರು.
‘ಕೆಪಿಎಸ್ಸಿ ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಸರ್ಕಾರ ಈಗಾಲೇ ತೆಗೆದುಕೊಂಡಿರುವ ಕ್ರಮಗಳು ಅನುಷ್ಠಾನಕ್ಕೆ ಬರುವವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು’ ಎಂದೂ ಅವರು ಆಗ್ರಹಿಸಿದರು.
261105-51-647281196

