ಬೆಂಗಳೂರು: ‘ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದ್ದು, ಇದನ್ನು ಪಾವತಿ ಮಾಡಿದ್ದರೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಸಾರಿಗೆ ಸಂಸ್ಥೆಯನ್ನು ಈ ಸರ್ಕಾರ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬಕ್ಕೆ ಮುನ್ನವೇ ಹಾಲಿನ ದರ ಮತ್ತು ಬಸ್ ಪ್ರಯಾಣ ದರ ಶೇ 40 ರಷ್ಟು ಏರಿಸುವ ಮೂಲಕ ಜನರನ್ನು ಸುಲಿಗೆ ಮಾಡಲು ಮುಂದಾಗಿದೆ. ಇದು ಖಂಡನೀಯ. ಇದರ ವಿರುದ್ಧ ಗುರುವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
‘ರಾಜ್ಯ ಸರ್ಕಾರದಿಂದ ಕೆಎಸ್ಆರ್ಟಿಸಿಗೆ ₹2,943 ಕೋಟಿ, ಎನ್ಡಬ್ಲ್ಯುಕೆಆರ್ಟಿಸಿಗೆ ₹1,306, ಬಿಎಂಟಿಸಿಗೆ ₹1,019, ಕೆಕೆಆರ್ಟಿಸಿಗೆ ₹999 ಕೋಟಿ ಸೇರಿ ಒಟ್ಟು ₹5,650.95 ಕೋಟಿ ಬಾಕಿ ಪಾವತಿಸಬೇಕಾಗಿದೆ. ಸರ್ಕಾರ ಮಾಡಿರುವ ತಪ್ಪಿಗೆ ಸಾರಿಗೆ ಸಚಿವ ಸುರೇಶ್ ಜನರ ಮೇಲೆ ಹೊರೆ ಹೇರುತ್ತಿದ್ದಾರೆ. ಸಾರಿಗೆ ಇಲಾಖೆಗೆ ಹಣ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದ್ದರಿಂದಲೇ ಹೀಗೆ ಮಾಡಲಾಗಿದೆ. ದೇಶದಲ್ಲೇ ನಂಬರ್ 1 ಎಂಬ ಹೆಸರು ಸಾರಿಗೆ ನಿಗಮಗಳಿಗೆ ಇತ್ತು. ಅಂತಹ ಸಂಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿ ಬೀದಿಗೆ ತಂದಿದೆ’ ಎಂದರು.
‘ನೌಕರರಿಗೂ ಸಾರಿಗೆ ನಿಗಮಗಳಿಂದ ಬಾಕಿ ಇಟ್ಟುಕೊಳ್ಳಲಾಗಿದೆ. ಭವಿಷ್ಯನಿಧಿ ₹2,901.53 ಕೋಟಿ ಬಾಕಿ ಹಾಗೂ ಇಂಧನ ಬಾಕಿ ₹827 ಕೋಟಿ ಇದೆ. 2026 ರ ಮೇ ತಿಂಗಳಲ್ಲಿ ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ ಇತ್ತು. ಇದರಲ್ಲಿ ವೇತನ, ಪಿಎಫ್, ಗ್ರ್ಯಾಚುಯಿಟಿ ಎಲ್ಲ ಸೇರಿದೆ. ಕೋವಿಡ್ ಸಮಯದಲ್ಲಿ ಎಲ್ಲ ಕಡೆ ಲಾಕ್ಡೌನ್ನಿಂದ ನಷ್ಟ ಇದ್ದ ಕಾರಣ ಸಾರಿಗೆ ನಿಗಮಗಳಿಗೂ ನಷ್ಟ ಆಗಿತ್ತು. ಅದನ್ನು ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಉಳಿದ ಸಮಯದಲ್ಲಿ ಸಾರಿಗೆ ನಿಗಮಗಳು ಲಾಭದಲ್ಲೇ ಇದ್ದವು’ ಎಂದು ಅಶೋಕ ವಿವರಿಸಿದರು.
–ಛಲವಾದಿ ನಾರಾಯಣಸ್ವಾಮಿ, ಪರಿಷತ್ತಿನ ವಿರೋಧ ಪಕ್ಷದ ನಾಯಕಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ತನ್ನದೇ ಯೋಜನೆಯ ಆರ್ಥಿಕ ಹೊರೆ ನಿಭಾಯಿಸಲಾಗದೆ, ಜನರಿಗೆ ಸೇವೆ ನೀಡಬೇಕಾದ ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನೇ ಸಂಕಷ್ಟಕ್ಕೆ ದೂಡಿದೆ..261105-44-857387587

