ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರ ಶೈಕ್ಷಣಿಕ ಅಧ್ಯಯನ ಹಾಗೂ ವೃತ್ತಿಪರ ಬೆಳವಣಿಗೆಗೆ ನೆರವಾಗಲು ಜಾಗತಿಕ ವೈದ್ಯಕೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ‘ಸ್ಟಡಿಮೆಡಿಕ್‌’ ನಾಲ್ಕು ಯೋಜನೆಗಳನ್ನು ರೂಪಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಜಾಗತಿಕ ವೈದ್ಯಕೀಯ ವೃತ್ತಿ ಶೃಂಗ–2026 ಉದ್ಘಾಟಿಸಿ ಮಾತನಾಡಿದ ಅವರು, ‘ಎಂಬಿಬಿಎಸ್‌ ಅಧ್ಯಯನ, ಸ್ನಾತಕೋತ್ತರ ನೀಟ್‌, ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಹಾಗೂ ಜಾಗತಿಕ ವೈದ್ಯಕೀಯ ವೃತ್ತಿ ಅವಕಾಶ ಎಂಬ ನಾಲ್ಕು ಯೋಜನೆಗಳ ಪ‍್ರಯೋಜನ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗಲಿದೆ’ ಎಂದರು.

‘ಕಲಿಕಾ ವ್ಯವಸ್ಥೆಯು ಓದುವುದು, ನೆನಪಿಸಿಕೊಳ್ಳುವುದು, ಅನ್ವಯಿಸುವುದು ಮತ್ತು ಪರಿಣತಿ ಸಾಧಿಸುವುದು ಎಂಬ ನಾಲ್ಕು ಹಂತಗಳ ಕಲಿಕಾ ವಿಧಾನವನ್ನು ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಮೂಲ ಪರಿಕಲ್ಪನೆಗಳ ಸ್ಪಷ್ಟ ಗ್ರಹಿಕೆ, ವಿಶ್ವವಿದ್ಯಾಲಯ ಪರೀಕ್ಷೆಗಳ ಸಿದ್ಧತೆ ಮತ್ತು ಪ್ರಾಯೋಗಿಕ ಕ್ಲಿನಿಕಲ್‌ ಜ್ಞಾನವನ್ನು ಗಟ್ಟಿಗೊಳಿಸಲು ನೆರವಾಗಲಿದೆ’ ಎಂದು ಹೇಳಿದರು.

ಸ್ಟಡಿಮೆಡಿಕ್‌ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯಾಚರಣಾಧಿಕಾರಿ (ಸಿಒಒ) ಡಾ.ಎನ್‌.ಎಸ್‌.ಸೌಮ್ಯಾ, ‘2016ರಲ್ಲಿ ಕೇರಳದಲ್ಲಿ ಆರಂಭವಾದ ಸ್ಟಡಿಮೆಡಿಕ್‌ ಪ್ರಮುಖ ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ವೇದಿಕೆಯಾಗಿ ಬೆಳೆದಿದೆ. ಸಂಸ್ಥೆಯು ಇದುವರೆಗೆ 2.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ತರಬೇತಿ ನೀಡಿದೆ. 1 ಲಕ್ಷ ವೈದ್ಯಕೀಯ ಅಭ್ಯರ್ಥಿಗಳಿಗೆ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಮಾರ್ಗದರ್ಶನ ಮಾಡಿದೆ. ವಿಶ್ವದಾದ್ಯಂತ 200ಕ್ಕೂ ಹೆಚ್ಚು ತಜ್ಞ ಮಾರ್ಗದರ್ಶಕರು ಮತ್ತು ಕೋರ್ಸ್‌ ನಿರ್ದೇಶಕರ ಬಲಿಷ್ಠ ಜಾಲದೊಂದಿಗೆ ಸಂಸ್ಥೆ 23 ಪ್ರಮುಖ ವೈದ್ಯಕೀಯ ಶಿಕ್ಷಣ ವಿಭಾಗಗಳಲ್ಲಿ ಸೇವೆ ಒದಗಿಸುತ್ತಿದೆ’ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ಕುಮಾರ್‌, ‘ವೈದ್ಯಕೀಯ ಕಾಲೇಜಿನಪ್ರವೇಶದ ಮೊದಲ ವರ್ಷದಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ತಲುಪುವಂತೆ ಮಾಡುವುದು ಸಂಸ್ಥೆಯ ಮೂಲ ಗುರಿ’ ಎಂದು ಹೇಳಿದರು.

261105-51-1244595136