ಬೆಂಗಳೂರು: ‘ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಕೇಂದ್ರ ಸರ್ಕಾರ ಯಜಮಾನನೂ ಅಲ್ಲ, ರಾಜ್ಯಗಳು ಜೀತದಾಳುಗಳೂ ಅಲ್ಲ. ಚುನಾಯಿತ ರಾಜ್ಯ ಸರ್ಕಾರ ಕೇಂದ್ರದ ಬಳಿ ಬರ ಪರಿಹಾರ ಕೇಳುವುದು ನ್ಯಾಯಸಮ್ಮತ ಹಕ್ಕು. ಕರ್ನಾಟಕದ ಜನರು ಬೆವರು ಸುರಿಸಿ, ಪಾವತಿಸಿರುವ ತೆರಿಗೆ ಹಣ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.
‘ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೀಡಿರುವ ಪ್ರತಿಕ್ರಿಯೆ ಹಾಗೂ ಬಳಸಿರುವ ಪದಗಳು ಅಸಹ್ಯ ಹುಟ್ಟಿಸುವಂತಿವೆ. ಕರ್ನಾಟಕದ ರೈತರು ಭಿಕ್ಷುಕರಲ್ಲ, ದೇಶಕ್ಕೆ ಅನ್ನ ನೀಡುವವರು. ರೈತರಿಗೆ ನೆರವಾಗುವುದು ಕೇಂದ್ರದ ಕರ್ತವ್ಯ. ನೆರವು ಕೇಳಿದರೆ ಅದನ್ನು ಭಿಕ್ಷೆ ಎಂದು ಬಿಂಬಿಸುವುದು ಯಾವ ರೀತಿಯ ಸಹಕಾರಿ ಒಕ್ಕೂಟ ವ್ಯವಸ್ಥೆ? ಇಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿರುವುದು ಬಿಜೆಪಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ’ ಎಂದಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ ವಿಪತ್ತು ನಿರ್ವಹಣಾ ಕಾಯ್ದೆ–2005 ಮತ್ತು ಹಣಕಾಸು ಆಯೋಗಗಳ ಶಿಫಾರಸುಗಳ ಆಧಾರದ ಮೇಲೆ ಸ್ಥಾಪಿಸಲಾದ ವ್ಯವಸ್ಥೆಗಳಾಗಿವೆ. ನೈಸರ್ಗಿಕ ವಿಕೋಪದ ಸಮಯದಲ್ಲಿ ರಾಜ್ಯಗಳಿಗೆ ನೆರವು ಒದಗಿಸುವುದೇ ಅವುಗಳ ಉದ್ದೇಶ. ಕೇಂದ್ರ ಸರ್ಕಾರ ಶೇ 75 ಹಾಗೂ ರಾಜ್ಯ ಸರ್ಕಾರ ಶೇ 25 ಅನುದಾನ ಒದಗಿಸುತ್ತವೆ. ಈ ವ್ಯವಸ್ಥೆಗಳಡಿ ನೆರವು ಕೇಳುವುದು ಭಿಕ್ಷೆಯಾದರೆ, ಸಂಸತ್ತು ಇಂತಹ ಕಾಯ್ದೆಗಳನ್ನು ಏಕೆ ರೂಪಿಸಿದೆ ಎಂದು ಬಿಜೆಪಿ ಉತ್ತರಿಸಬೇಕು ಎಂದಿದ್ದಾರೆ.
ವಿವಿಧ ತೆರಿಗೆಗಳು, ಸೆಸ್ಗಳು ಮತ್ತು ಹೆಚ್ಚುವರಿ ತೆರಿಗೆಗಳ ಮೂಲಕ ಕರ್ನಾಟಕವು ವಾರ್ಷಿಕವಾಗಿ ಸುಮಾರು ₹5 ಲಕ್ಷ ಕೋಟಿ ಕೇಂದ್ರಕ್ಕೆ ನೀಡುತ್ತಿದೆ. ಆದರೆ, ಪ್ರತಿ ರೂಪಾಯಿಗೆ ಪರ್ಯಾಯವಾಗಿ ತೆರಿಗೆ ಹಂಚಿಕೆ ಮತ್ತು ಅನುದಾನಗಳ ರೂಪದಲ್ಲಿ ಕೇವಲ 13 ಪೈಸೆ ಮರಳಿ ಬರುತ್ತಿದೆ. ಇದು ರಾಜ್ಯಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯ ಎಂದು ದೂರಿದ್ದಾರೆ. ‘ಅ.7ರಂದು ಅಶೋಕ ಅವರೇ ಕೇಂದ್ರ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ, ಹೆಚ್ಚಿನ ಪರಿಹಾರ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು. ಅವರು ಕೇಳಿದರೆ ಅದು ರೈತರ ಪರವಾದ ಹೋರಾಟ. ರಾಜ್ಯ ಸರ್ಕಾರ ಬೇಡಿಕೆಯನ್ನು ಮುಂದಿಟ್ಟರೆ ಅದು ಭಿಕ್ಷೆಯಾಗುತ್ತದೆಯೇ’ ಎಂದಿದ್ದಾರೆ.
ಇಂತಹ ವಿಷಯಗಳಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಸಂಘರ್ಷ ಸಲ್ಲದು. ಪಕ್ಷ ರಾಜಕಾರಣಕ್ಕಿಂತ ರೈತರ ಹಿತಾಸಕ್ತಿ ದೊಡ್ಡದು. ರಾಜ್ಯ ಸರ್ಕಾರ ರೈತರ ಹಿತವನ್ನು ಆಯ್ಕೆ ಮಾಡಿಕೊಂಡಿದೆ. ಬಿಜೆಪಿ ರಾಜಕೀಯ ಮಾಡುತ್ತಿದೆ
ಜಿ. ಪರಮೇಶ್ವರ, ಉಪಮುಖ್ಯಮಂತ್ರಿ
261105-51-1385392408

