ಬೆಂಗಳೂರು: ‘ನಿಮ್ಮದು (ಬಿಜೆಪಿ) ಅತಿಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿಸಿದರೆ ಕಂಬಿ ಎಣಿಸಬೇಕಾಗುತ್ತದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರನ್ನು ಉದ್ದೇಶಿಸಿ ಹೇಳಿದರು.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಕೆಲವು ದಿನಗಳ ಹಿಂದೆ ಬಿ.ವೈ.ವಿಜಯೇಂದ್ರ ‘ಕಾಂಗ್ರೆಸ್ ನನ್ಮಕ್ಕಳು’ ಎಂದಿದ್ದರು. ಆರ್‌ಎಸ್‌ಎಸ್ ಚಡ್ಡಿಯನ್ನು ತಲೆ ಮೇಲೆ ಹೊತ್ತುಕೊಂಡ ಮಾತ್ರಕ್ಕೆ ಸರ್ವಜ್ಞರು ಎಂದುಕೊಂಡಿದ್ದಾರೆ. ಇದೇನು ಉತ್ತರ ಪ್ರದೇಶ ಅಥವಾ ಗುಜರಾತ್ ಅಲ್ಲ’ ಎಂದು ಹೇಳಿದರು
‘ಛಲವಾದಿ ಅವರು ಕೊಲೆಗೆ ಪ್ರಚೋದನೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಯಾವ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ಬಾಯಿಗೆ ಬಂದಂತೆ ಮಾತನಾಡಿ ಆ ಮೇಲೆ ಸ್ಪಷ್ಟನೆ ಕೊಟ್ಟರೆ ಆಗುತ್ತದೆಯೇ’ ಎಂದೂ ಪ್ರಶ್ನಿಸಿದರು.
‘ಇವತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡು, ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡು ಎಂದು ಆರ್‌ಎಸ್‌ಎಸ್‌ನಿಂದ ಬೆಳಿಗ್ಗೆಯೇ ಛಲವಾದಿಗೆ ವಾಟ್ಸ್‌ಆ್ಯಪ್ ಸಂದೇಶ ಬರುತ್ತದೆ. ಹೀಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡು ತ್ತಿದ್ದಾರೆ’ ಎಂದು ಹೇಳಿದರು.
ಬಂಧಿಸುವುದಿದ್ದರೆ ಬಂಧಿಸಲಿ: ಸವಾಲು
‘ಕೋಲಾರದಲ್ಲಿ ನಾನು ಮಾತನಾಡಿದ ವಿಡಿಯೊವನ್ನು ಕಾಂಗ್ರೆಸ್‌ನವರು ತಿರುಚಿದ್ದಾರೆ. ನನ್ನ ಭಾಷಣದ ಮೂಲ ವಿಡಿಯೊವನ್ನು ಪೊಲೀಸರಿಗೆ ಕಳುಹಿಸಿದ್ದೇನೆ. ಇಷ್ಟರ ಮೇಲೂ ಬಂಧಿಸುವುದಿದ್ದರೆ ಬಂಧಿಸಲಿ’ ಎಂದು ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕೋಲಾರದಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ತುಂಡು ಮಾಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ನಾಯಕರನ್ನು ತುಂಡು ಮಾಡಿ ಎಂದು ಹೇಳಿಲ್ಲ. ನನ್ನ ಭಾಷಣದ ವಿಡಿಯೊವನ್ನು ತಿರುಚಿ ಹರಿ ಬಿಟ್ಟಿದ್ದಾರೆ’ ಎಂದು ಅವರು ತಮ್ಮ ಭಾಷಣದ ವಿಡಿಯೊ ಪ್ರದರ್ಶಿಸಿದರು.
‘ನಿಜಲಿಂಗಪ್ಪ, ದೇವರಾಜ ಅರಸು, ವೀರೇಂದ್ರಪಾಟೀಲ, ಗುಂಡೂರಾವ್, ಬಂಗಾರಪ್ಪ ಅವರೆಲ್ಲ ಕಾಂಗ್ರೆಸ್ ಅನ್ನು ತುಂಡು ಮಾಡಿದ್ದಾರೆ. ಕಾಂಗ್ರೆಸ್‌ಗೆ ನಿಷ್ಠೆಯಿಂದ ಕೆಲಸ ಮಾಡಿದವರನ್ನೆಲ್ಲ ಸರ್ವನಾಶ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಸರದಿ, ಅವರನ್ನು ನಾಶಪಡಿಸಲು ಹೊರಟಿದ್ದಾರೆ’ ಎಂದರು.
‘ನಮಗೆ ಆರ್‌ಎಸ್‌ಎಸ್ ಆಗಲಿ ಬೇರೆ ಎಲ್ಲಿಂದಲೂ ಯಾವುದೇ ಸೂಚನೆಗಳು ಬರುವುದಿಲ್ಲ. ಇನ್ನಾದರೂ ಸುಳ್ಳು ಹೇಳುವುದನ್ನು ಬಿಡಲಿ’ ಎಂದರು.
ರಾಜ್ಯದಲ್ಲೇನು ತುರ್ತುಪರಿಸ್ಥಿತಿ ಇದೆಯಾ: ಅಶೋಕ ಪ್ರಶ್ನೆ
‘ತುರ್ತುಪರಿಸ್ಥಿಯಲ್ಲಿ ರಾಹುಲ್ ಗಾಂಧಿ ಅಜ್ಜಿಗೆ ನಾವು ಹೆದರಲಿಲ್ಲ. ಇಂದಿರಾಗಾಂಧಿಗೆ ಧಿಕ್ಕಾರ ಕೂಗಿದ್ದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದರು. ಬನ್ನಿ ನಿಮಗೆ ರೆಡ್ ಕಾರ್ಪೆಟ್ ಹಾಕುತ್ತೇವೆ ನಮ್ಮನ್ನೆಲ್ಲ ಬಂಧಿಸಿಕೊಂಡು ಹೋಗಿ’ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ ಸವಾಲು ಒಡ್ಡಿದರು.
‘ರಾಜ್ಯದಲ್ಲೇನು ತುರ್ತುಪರಿಸ್ಥಿತಿ ಇದೆಯಾ? ಕಂಬಿ ಹಿಂದೆ ಹಾಕುತ್ತೇವೆ ಎನ್ನುತ್ತೀರಲ್ಲ ಹಾಕಿ. ಎಲ್ಲಿಗೆ ಬರಬೇಕು ಅಲ್ಲಿಗೆ ಬರುತ್ತೇವೆ. ಜೈಲಿಗೆ ಹಾಕಿ. ಇನ್ನು ಒಂದು ವರ್ಷ ಅಧಿಕಾರ ಇದೆ ಎಂದು ಪ್ರಿಯಾಂಕ್ ಎದ್ದೆದ್ದು ಕುಣಿಯುತ್ತಿದ್ದಾರೆ’ ಎಂದರು.
‘ಇವತ್ತು ವಿಧಾನಪರಿಷತ್ ವಿರೋಧಪಕ್ಷದ ನಾಯಕರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಧಮಕಿ ಹಾಕಿ ಪ್ರತಿಭಟನೆ ಮಾಡಿದ್ದಾರೆ, ಅಲ್ಲಿ ಏನಾದರೂ ಅನಾಹುತ ಆಗಿದ್ದರೆ ಅದಕ್ಕೆ ಯಾರು ಜವಾಬ್ದಾರಿ ಹೊರುತ್ತಿದ್ದರು. ಪೊಲೀಸರು ರಕ್ಷಣೆ ನೀಡಲಿಲ್ಲ. ಅಲ್ಲಿ ಹೋಗಿ ಗಲಾಟೆ ಮಾಡುತ್ತಾರೆ ಎಂಬ ಗುಪ್ತದಳದ ಮಾಹಿತಿ ಇರಲಿಲ್ಲವಾ? ಇವೆಲ್ಲ ಬಹಳ ದಿನ ನಡೆಯುವುದಿಲ್ಲ ಎಂಬುದನ್ನು ಪೊಲೀಸರು ನೆನಪಿಟ್ಟುಕೊಳ್ಳಬೇಕು’ ಎಂದು ಹೇಳಿದರು.

261105-51-985998645

