ಬೆಂಗಳೂರು: ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ 2.0 ಅಡಿ ಏಳು ವರ್ಷಗಳಲ್ಲಿ ಏಳು ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿರುವ ‘ಬೆಂಗಳೂರು ಕೌಶಲ ಶೃಂಗಸಭೆ’ಯಲ್ಲಿ ಬುಧವಾರ ಅವರು ಮಾತನಾಡಿದರು.

ಈ ಯೋಜನೆಯಡಿ ತರಬೇತಿ, ವಿಶೇಷ ಯೋಜನೆಗಳು, ಉದ್ಯೋಗಕ್ಕೆ ನೆರವು ಮತ್ತು ಡಿಜಿಟಲ್ ಆಡಳಿತವನ್ನು ಒಂದೇ ಚೌಕಟ್ಟಿನಡಿ ತರಲಾಗಿದೆ. ಪ್ರತಿ ವರ್ಷ ಸುಮಾರು 75,000 ಅಭ್ಯರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಲಾಗುವುದು ಎಂದರು.

‘ಬೆಂಗಳೂರಿನ ಹೊರಗೆ ಉದ್ಯೋಗ ಸೃಷ್ಟಿ ಮಾಡಿದರೆ, ಅಂತಹ ಉದ್ದಿಮೆಗಳಿಗೆ ಒಂದು ಉದ್ಯೋಗ ಸೃಷ್ಟಿಗೆ ₹2,500 ಪ್ರತಿ ತಿಂಗಳು ನೀಡುತ್ತೇವೆ.‌ ಗ್ರಾಮೀಣ ಪ‍್ರತಿಭೆ ಗುರುತಿಸಿ, ಬೆಳೆಸಬೇಕು. ನನ್ನ ವೃತ್ತಿ, ನನ್ನ ಆಯ್ಕೆ ಯೋಜನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಬಗ್ಗೆ ತಿಳಿದುಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದ್ದೇವೆ’ ಎಂದು ತಿಳಿಸಿದರು.

30 ಸಾವಿರ ಸೀಟು ಖಾಲಿ: ರಾಜ್ಯದಲ್ಲಿ ಈ ವರ್ಷ 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ಮೆಡಿಕಲ್ ಸೀಟುಗಳು ಸಹ ಭರ್ತಿಯಾಗದೇ ಉಳಿದಿವೆ‌. ಅನೇಕ ಎಂಜಿನಿಯರಿಂಗ್ ಪದವೀಧರರು ಉದ್ಯೋಗಕ್ಕಾಗಿ ನನ್ನ ಬಳಿ ಬರುತ್ತಾರೆ. ಇನ್ಫೋಸಿಸ್ ಸಂಸ್ಥೆಯಲ್ಲೂ ಅನೇಕರಿಗೆ ಕೆಲಸ ದೊರೆಯುತ್ತಿಲ್ಲ. ಇದಕ್ಕೆ ಕೌಶಲವೇ ದಾರಿಯಾಗಬೇಕು ಎಂದರು.

‘ರಾಜ್ಯದಲ್ಲಿ 550 ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿವೆ. 2029ರ ವೇಳೆಗೆ ಸುಮಾರು 500 ಹೊಸ ಕೇಂದ್ರಗಳು ಮತ್ತು 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಮುಂದಿನ ಏಳು ವರ್ಷಗಳಲ್ಲಿ ಸುಮಾರು 30 ಲಕ್ಷ ಫಲಾನುಭವಿಗಳನ್ನು ತಲುಪುವುದು ನಮ್ಮ ಗುರಿ. ಇದಕ್ಕಾಗಿ ಅಂದಾಜು ₹5 ಸಾವಿರ ಕೋಟಿ ಹೂಡಿಕೆ ಮಾಡುವ ಉದ್ದೇಶ ಇದೆ’ ಎಂದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ ಹಾಜರಿದ್ದರು.

ವಿಷನ್ ಗ್ರೂಪ್‌ನಲ್ಲಿ ಸುಬ್ರತೋ ಬಾಗ್ಚಿ

‘ರಾಜ್ಯದ ಕೌಶಲಾಭಿವೃದ್ಧಿಯ ಭವಿಷ್ಯಕ್ಕೆ ಮಾರ್ಗದರ್ಶನ ನೀಡಲು ‘ಕೌಶಲ್ಯಾಭಿವೃದ್ಧಿ ವಿಷನ್ ಗ್ರೂಪ್’ ರಚಿಸಲಾಗಿದ್ದು, ಮೈಂಡ್‌ ಟ್ರೀ ಸಂಸ್ಥೆಯ ಸಹ- ಸ್ಥಾಪಕ ಸುಬ್ರತೋ ಬಾಗ್ಚಿ ಅವರು ಸಮಿತಿ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಉದ್ಯಮ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರದ ಅನೇಕ ಗಣ್ಯರು ಈ ಸಮಿತಿಯಲ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ’ ಎಂದು ಶಿವಕುಮಾರ್ ಹೇಳಿದರು.

261105-51-1100899275