ಮೈಸೂರು: ‘ನಾವು ಅರಮನೆ ಬಿಟ್ಟು ತೆರಳಲು ನಿರಾಕರಿಸಿದಾಗ ಸರ್ಕಾರ ನಾನಾ ರೀತಿಯ ಕಿರುಕುಳ ನೀಡಿತ್ತು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆರೋಪಿಸಿದ್ದಾರೆ.
ಅರಮನೆ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಮನೆ ಸ್ವಾಧೀನ ಕಾಯ್ದೆ ಜಾರಿಗೆ ತಂದ ರಾಜ್ಯ ಸರ್ಕಾರ, ನಾವು ಅರಮನೆ ಬಿಟ್ಟು ತೆರಳಲು ಮೈಸೂರಿನಲ್ಲಿ ಒಂದು ಎಕರೆ ಜಮೀನು ಹಾಗೂ ₹1 ಕೋಟಿ ನೀಡುವ ಪ್ರಸ್ತಾವ ಮುಂದಿಟ್ಟಿತು ಎಂದು ತಿಳಿಸಿದರು.
‘ಸರ್ಕಾರದ ಈ ಪ್ರಸ್ತಾವವನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದಾದ ಬಳಿಕ ನಾವು ಹಲವು ಸಂಕಷ್ಟ ಎದುರಿಸಿದೆವು. ತೆರಿಗೆ ಇಲಾಖೆ ಮೂಲಕ ನಮ್ಮ ಆದಾಯ ಮುಟ್ಟುಗೋಲು ಹಾಕಿದರು. ತೆರಿಗೆ ಬಾಕಿ ತೀರಿಸಲು ಕೆಲವು ಆಸ್ತಿಗಳನ್ನು ಹರಾಜು ಹಾಕಿದರು. ನಾವು ವಾಸಿಸುತ್ತಿದ್ದ ಭಾಗಕ್ಕೆ ದೀರ್ಘಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಅರಮನೆ ಬಿಟ್ಟು ತೆರಳುವಂತೆ ಮಾಡಲು ನಾನಾ ಪ್ರಯತ್ನ ಮಾಡಿದರು’ ಎಂದು ಆರೋಪಿಸಿದರು.
ಜಯ ಚಾಮರಾಜ ಒಡೆಯರ್ ತಮ್ಮ ಸಂಸ್ಥಾನವನ್ನು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ 1950ರ ಜ.23ರಂದು ಭಾರತದ ಗವರ್ನರ್ ಜನರಲ್ ಮತ್ತು ಮೈಸೂರು ಮಹಾರಾಜರೊಂದಿಗೆ ನಡೆದ ಒಪ್ಪಂದದಲ್ಲಿ ಮಹಾರಾಜರು ತಮಗೆ ಸೇರಿದ, ಆದರೆ ರಾಜ್ಯದ ಆಸ್ತಿಗಳಿಂದ ಭಿನ್ನವಾದ ಸ್ಥಿರಾಸ್ತಿ ಮತ್ತು ಚರಾಸ್ತಿ ಪಟ್ಟಿ ಸಲ್ಲಿಸಿದರು ಎಂದು ತಿಳಿಸಿದರು.
ಭಾರತ ಸರ್ಕಾರದ ರಾಜ್ಯಗಳ ಸಚಿವಾಲಯದ ಕಾರ್ಯದರ್ಶಿ ವಿ.ಪಿ.ಮೆನನ್ 1951ರ ಜನವರಿ 8ರಂದು ಬರೆದ ಪತ್ರದ ಮೂಲಕ ಅಂಗೀಕರಿಸಿದರು. ಹೀಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ತಿಗಳ ಸ್ಪಷ್ಟವಾದ ವರ್ಗೀಕರಣ ಇದೆ. ಬೆಂಗಳೂರು, ಮೈಸೂರು ಅರಮನೆ ಮತ್ತು ಇತರ ಅರಮನೆಗಳು ಹಾಗೂ ಕಟ್ಟಡಗಳನ್ನು ಮಹಾರಾಜರು ತಮ್ಮ ಸ್ವಂತ ಹಣದಿಂದ ಖರೀದಿಸಿದ್ದರು ಅಥವಾ ನಿರ್ಮಿಸಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದರು.
‘ಸರ್ಕಾರ ದೂಷಿಸಿಲ್ಲ’
‘ಈ ಹಿಂದೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ ನಾನು ಸರ್ಕಾರವನ್ನು ದೂಷಿಸಿಲ್ಲ. ಪೊಲೀಸರಿಂದಾದ ಗೊಂದಲದ ಬಗ್ಗೆ ತಿಳಿಸಿ, ಸಲಹೆ ನೀಡಿದ್ದೇನೆ’ ಎಂದು ಪ್ರಮೋದಾದೇವಿ ಸ್ಪಷ್ಟಪಡಿಸಿದರು.
ಚಾಮುಂಡಿ ಬೆಟ್ಟದಲ್ಲಿ ನಡೆಯುವ ರಥೋತ್ಸವವೂ ದಸರಾಕ್ಕೆ ಸಂಬಂಧಪಟ್ಟಿದೆ. ಅಲ್ಲಿ ಹಲವರಿಗೆ ದೇವರ ದರ್ಶನ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ರಥೋತ್ಸವದ ದಿನ ಮೆರವಣಿಗೆ ನಡೆಸಿದರೆ, ವಿಜಯದಶಮಿ ಮತ್ತು ಆಯುಧ ಪೂಜೆಯ ದಿನ ನಡೆಯುವ ಖಾಸಗಿ ಧಾರ್ಮಿಕ ಆಚರಣೆಗಳು ಸುಗಮವಾಗಿ ನಡೆಸಲು ಸಾಧ್ಯ ಎಂದು ತಿಳಿಸಿದ್ದಾಗಿ ಅವರು ಹೇಳಿದರು.
‘ಅರಮನೆ ಹಸ್ತಾಂತರಿಸಲು ಒತ್ತಡ ಹೇರಿತ್ತು’
‘1976ರಲ್ಲಿ ಅರಮನೆ ನಿರ್ವಹಣೆ ಹಾಗೂ ಆಡಳಿತಕ್ಕಾಗಿ ಕೆಲವೊಂದು ಭಾಗಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸುವ ಪತ್ರ ನೀಡುವಂತೆ ನನ್ನ ಅತ್ತೆ ತ್ರಿಪುರಸುಂದರಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಿ ಸರ್ಕಾರ ಪ್ರಸ್ತಾಪಿಸಿತು. ಅರಮನೆಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿ, ವೀಕ್ಷಕರಿಂದ ಸಂಗ್ರಹವಾದ ಪ್ರವೇಶ ಶುಲ್ಕ, ಬಾಡಿಗೆ ಮೊತ್ತ ಮುಂತಾದ ಆದಾಯವನ್ನು ಅರಮನೆ ನಿರ್ವಹಣೆ, ಬಾಕಿ ಇರುವ ಸಾಲ ಮತ್ತು ತೆರಿಗೆ ಬಾಕಿ ತೀರಿಸಲು ಬಳಸುವುದಾಗಿ ಒಪ್ಪಂದವಾಗಿತ್ತು’ ಎಂದು ಪ್ರಮೋದಾದೇವಿ ಮಾಹಿತಿ ನೀಡಿದರು.
ಸರ್ಕಾರವು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡು ಪ್ರವೇಶ ಶುಲ್ಕದಲ್ಲಿ ಸಂಗ್ರಹವಾದ ಆದಾಯವನ್ನು ಸರ್ಕಾರಿ ಖಜಾನೆಗೆ ಜಮೆ ಮಾಡಲಾಯಿತು. ಈ ಬಗ್ಗೆ ಸರ್ಕಾರದೊಂದಿಗೆ ಪತ್ರವ್ಯವಹಾರ ನಡೆಸಿದರೂ ಉತ್ತರ ಸಿಗಲಿಲ್ಲ. ಹೀಗಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೈಕೋರ್ಟ್ ಮೊರೆ ಹೋದರು. ರಾಜ್ಯ ಸರ್ಕಾರದ ನಿರ್ವಹಣೆ ಮತ್ತು ಆಡಳಿತದಲ್ಲಿರುವ ಅರಮನೆ ಭಾಗದ ಆಸ್ತಿಗಳ ನಿರ್ವಹಣಾ ಜವಬ್ದಾರಿಯನ್ನು 30 ದಿನದ ಒಳಗಾಗಿ ಒಡೆಯರ್ ಅವರಿಗೆ ಹಸ್ತಾಂತರಿಸುವಂತೆ ಆದೇಶಿಸಿತು. ಆದರೆ ಸರ್ಕಾರವು ಮೈಸೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1998 ಜಾರಿಗೆ ತಂದಿತು ಈ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿದ್ದು, ಇಂದಿಗೂ ವಿಚಾರಣಾ ಹಂತದಲ್ಲಿದೆ ಎಂದರು.
– ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥೆನಾವು ಮೈಸೂರು ಅರಮನೆಯಲ್ಲಿ ವಾಸಿಸುತ್ತಿರುವುದು ನ್ಯಾಯಾಲಯ ನೀಡಿರುವ ಆದೇಶದ ಕಾರಣದಿಂದ261105-51-1436849993

