ರಾಮನಗರ: ಮುಖ್ಯಮಂತ್ರಿಯಾದ ಬಳಿಕ ಮೊದಲ ಸಲ ಜಿಲ್ಲಾಕೇಂದ್ರವಾದ ರಾಮನಗರಕ್ಕೆ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಗುರುವಾರ ಭೇಟಿ ನೀಡುವ ಡಿ.ಕೆ. ಶಿವಕುಮಾರ್ ಅವರ ಸ್ವಾಗತಕ್ಕೆ ರೇಷ್ಮೆನಗರಿ ಸಜ್ಜಾಗಿದೆ. ನಗರಸಭೆ ಹಮ್ಮಿಕೊಂಡಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ, ಸೌಲಭ್ಯಗಳ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.

ಸಿ.ಎಂ ಭೇಟಿ ಹಿನ್ನೆಲೆಯಲ್ಲಿ ಬಿ.ಎಂ. ರಸ್ತೆ ಹಾಗೂ ಜೂನಿಯರ್ ಕಾಲೇಜು ರಸ್ತೆಯುದ್ದಕ್ಕೂ ಮುಖ್ಯಮಂತ್ರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಆಂಜನೇಯ ಗೋಪುರದ ಬಳಿ ಹಾಗೂ ಎಸ್‌ಪಿ ಕಚೇರಿ ವೃತ್ತದ ಬಳಿ 35 ಅಡಿ ಎತ್ತರದ ಕಟೌಟ್‌ ಹಾಗೂ ಸ್ವಾಗತದ ಕಮಾನು ಗಮನ ಸೆಳೆಯುತ್ತಿದೆ.

ಕಾರ್ಯಕ್ರಮ ನಡೆಯಲಿರುವ ಜೂನಿಯರ್ ಕಾಲೇಜು ರಸ್ತೆಯಿಂದ ವಾಟರ್ ಟ್ಯಾಂಕ್ ವೃತ್ತದವರೆಗೆ ಮಾಡಿರುವ ವಿದ್ಯುತ್ ದೀಪಾಲಂಕಾರ ಕಣ್ಣು ಕೋರೈಸುತ್ತಿದೆ. ರಸ್ತೆಯುದ್ದಕ್ಕೂ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ವೇದಿಕೆ ಕಾರ್ಯಕ್ರಮ ನಡೆಯಲಿರುವ ಮೈದಾನದಲ್ಲಿ ದೊಡ್ಡ ವೇದಿಕೆ ಜೊತೆಗೆ ಸಭಿಕರಿಗೆ ಮೈದಾನ ಪೂರ್ತಿ ಆಸನ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಡಿಕೆಶಿ ಬರುವುದು ಖಚಿತವಾಗುತ್ತಿದ್ದಂತೆ ನಗರದ ಜೂನಿಯರ್ ಕಾಲೇಜು ರಸ್ತೆಯಿಂದಿಡಿದು ನಗರಸಭೆವರೆಗಿನ ರಸ್ತೆಯ ಗುಂಡಿಗಳಿಗೆ ಡಾಂಬರು ಹಾಕಿ ಮುಚ್ಚಲಾಗಿದೆ. ಕ್ಲಾಕ್‌ ಟವರ್ ಸುತ್ತಲಿನ ಫುಟ್‌ಪಾತ್‌ ಅಭಿವೃದ್ಧಿಪಡಿಸಲಾಗಿದೆ. ಕಾರ್ಯಕ್ರಮದ ಮಾರ್ಗದುದ್ದಕ್ಕೂ ಇದ್ದ ಮರಗಳ ಒಣಗಿದ ಕೊಂಬೆಗಳನ್ನು ಕತ್ತರಿಸಲಾಗಿದೆ.

ನಗರಕ್ಕೆ ಸಂಜೆ 5 ಗಂಟೆಗೆ ಬರಲಿರುವ ಸಿ.ಎಂ, ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕಟ್ಟಡ ವೀಕ್ಷಿಸಲಿದ್ದಾರೆ. ಅಲ್ಲಿಂದ ನಗರಸಭೆಗೆ ಬಂದು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ನಂತರ ಸಭಾಂಗಣ, ಕ್ಲಾಕ್ ಟವರ್, ಫುಡ್‌ಸ್ಟ್ರೀಟ್ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದಲ್ಲಿ ಸಿ.ಎಂ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಭಾಗವಹಿಸಲಿದ್ದಾರೆ.

ಏನೇನು ಉದ್ಘಾಟನೆ?

ಕೆಂಪೇಗೌಡ ಪ್ರತಿಮೆ, ಸಭಾಂಗಣ

ನಗರಸಭೆ ಆವರಣದಲ್ಲಿ ಈಗಾಗಲೇ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವೇಶ್ವರ ಪುತ್ಥಳಿ ಜೊತೆಗೆ ನಾಡಪ್ರಭು ಕೆಂಪೇಗೌಡ ಪ್ರತಿಮೆ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಪ್ರತಿಮೆ ಹಾಗೂ ನಗರಸಭೆಯ 2ನೇ ಮಹಡಿಯಲ್ಲಿ ನಿರ್ಮಿಸಿರುವ ಡಿ. ದೇವರಾಜ ಅರಸು ಹೆಸರಿನ ಸಭಾಂಗಣ ಲೋಕಾರ್ಪಣೆಯಾಗಲಿದೆ.

ಗಡಿಯಾರ ಗೋಪುರ

ನಗರದ ಜೂನಿಯರ್ ಕಾಲೇಜು ರಸ್ತೆ, ರೈಲು ನಿಲ್ದಾಣ ರಸ್ತೆ ಹಾಗೂ ಶ್ರೀರಾಮ ಟಾಕೀಸ್ ಸೇರಿದಂತೆ ಮೂರು ರಸ್ತೆಗಳು ಒಗ್ಗೂಡುವ ವಾಟರ್ ಟ್ಯಾಂಕ್ ವೃತ್ತದಲ್ಲಿ ನಿರ್ಮಿಸಿರುವ ಗಡಿಯಾರ ಗೋಪುರ (ಕ್ಲಾಕ್ ಟವರ್). ಸುಮಾರು ₹49.99 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗೋಪುರವು ಅತ್ಯಾಕರ್ಷವಾಗಿದೆ.

ಫುಡ್ ಸ್ಟ್ರೀಟ್

ನಗರದಲ್ಲಿ ಹೆಚ್ಚುತ್ತಿರುವ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಪೋಷಿಸಿ ಒಂದೇ ಸೂರಿನಡಿ ಎಲ್ಲವೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ನಗರದ ಬಿ.ಎಂ. ರಸ್ತೆಯ ಗಾಂಧಿನಗರ ವೃತ್ತದ ಯುನಿಲೆಟ್ ಷೋರೂಂ ಎದುರು ‘ಫುಡ್‌ ಸ್ಟ್ರೀಟ್’ (ಆಹಾರ ವೃತ್ತ) ನಿರ್ಮಿಸಲಾಗಿದೆ. ನಗರಸಭೆ ನಿಧಿಯ ₹80 ಲಕ್ಷ ವೆಚ್ಚದಲ್ಲಿ ತಲೆ ಎತ್ತಿರುವ ಫುಡ್ ಸ್ಟ್ರೀಟ್‌ನಲ್ಲಿ 37 ಮಳಿಗೆಗಳಿವೆ.

ವಿಮೆ ಬಾಂಡ್, ಸೌಲಭ್ಯ ವಿತರಣೆ

ನಗರದ 11,800 ಮಂದಿಗೆ ₹4 ಲಕ್ಷದ ಉಚಿತ ಜೀವವಿಮೆ ಬಾಂಡ್, ಆಟೊ ಚಾಲಕರು ಮತ್ತು ಫಿಲೇಚರ್ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ. ಮೇದಾರ, ದರ್ಜಿ, ಗಾಣಿಗ, ವಿಶ್ವಕರ್ಮ, ಅಲೆಮಾರಿಗಳಿಗೆ, ಬಾರ್ ಬೆಂಡರ್ ಕಾರ್ಮಿಕರಿಗೆ ಟೂಲ್ ಕಿಟ್, ಮಹಿಳಾ ಸ್ವ ಸಹಾಯ ಸಂಘಗಳಿಗೆ ನೋಟ್ ಬುಕ್–ಟ್ರಂಕ್, ಟೀ ಅಂಗಡಿಯವರಿಗೆ ಸ್ಟೀಮರ್ ವಿತರಣೆ.

25 ಮಂದಿಗೆ ಕೆಂಗಲ್ ಪ್ರಶಸ್ತಿ

ರಾಜ್ಯೋತ್ಸವ ಪ್ರಯುಕ್ತ ನಗರಸಭೆ ನೀಡುವ ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ’ಗೆ ಈ ಸಲ ವಿವಿಧ ಕ್ಷೇತ್ರಗಳ 25 ಮಂದಿ ಆಯ್ಕೆಯಾಗಿದ್ದಾರೆ. ಜಾನಪದ– ಬಾನಂದೂರು ಕೆಂಪಯ್ಯ. ಪತ್ರಿಕೋದ್ಯಮ– ಬಿ.ವಿ. ಸೂರ್ಯಪ್ರಕಾಶ್, ಚೆಲುವರಾಜು, ಸೌಮ್ಯ ರಮಾಕಾಂತ್. ಶಿಕ್ಷಣ– ಅನ್ಸರ್‌ ಉಲ್ ಹಕ್. ಸಂಗೀತ– ಜೋಹಾನ್ ಕೆ. ಕ್ಯಾಲಿಕೇಟರ್ಸ್. ರಂಗಭೂಮಿ– ವಿಜಯಕುಮಾರ್, ರವಿಕುಮಾರ್ ಎ.ಆರ್. ಅರೇಹಳ್ಳಿ. ಸಾಂಸ್ಕೃತಿಕ– ರಾ.ಬಿ. ನಾಗರಾಜು. ಹೋಟೆಲ್ ಉದ್ಯಮ– ಜನಾರ್ದನ ಹೋಟೆಲ್ ಪ್ರಶಾಂತ್. ಲೆಕ್ಕ ಪರಿಶೋಧನೆ ಮತ್ತು ಕಾನೂನು ಕ್ಷೇತ್ರ–ಕೆ.ಆರ್. ಪ್ರದೀಪ್. ಸಾಹಿತ್ಯ– ಎಲ್.ಸಿ. ರಾಜು, ಶೈಲಜಾ ಶ್ರೀನಿವಾಸ್ ಆಚಾರ್. ಸಮಾಜ ಸೇವೆ– ಎಚ್.ವಿ. ಶೇಷಾದ್ರಿ ಅಯ್ಯರ್, ಎಸ್. ಗವಿಯಯ್ಯ, ಎಸ್. ಪದ್ಮರೇಖಾ. ಕ್ರೀಡೆ– ಎಂ.ಎಸ್. ಅಶೋಕ್ ಕುಮಾರ್, ಉಮೇಶ್. ವೈದ್ಯಕೀಯ– ಡಾ. ರಾಜು ಅಯ್ಯರ್ ಮತ್ತು ಡಾ. ನಯಾಜ್ ಅಹಮದ್. ಸಂಸ್ಕೃತ ಮತ್ತು ಸಾಹಿತ್ಯ– ವಿದ್ವಾನ್ ಚಂದ್ರಶೇಖರಯ್ಯ. ಕಲೆ– ರೇಣುಕಾ ಪ್ರಸಾದ್. ಧಾರ್ಮಿಕ– ಮಹದೇವ ಶಾಸ್ತ್ರಿ. ಹೋರಾಟ– ಎಸ್. ಶಿವಶಂಕರ್. ಸೇವೆ– ಜಯಕರ ಶೆಟ್ಟಿ (ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ).

ಕೆ.ಶೇಷಾದ್ರಿ ಶಶಿ, ಅಧ್ಯಕ್ಷ, ನಗರಸಭೆನಗರಸಭೆಯು ಜನಪರ ಆಡಳಿತದ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಅವುಗಳ ಲೋಕಾರ್ಪಣೆ ಮತ್ತು ಉದ್ಘಾಟನೆ ನಮ್ಮ ನೆಲದ ಹೆಮ್ಮೆಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ನೆರವೇರಲಿದೆ

261105-14-376924992