ಚಿತ್ರದುರ್ಗ: ‘ಹಾಲಿನ ಬೆಲೆ ₹ 10– ₹ 14, ಬಸ್ ಪ್ರಯಾಣ ದರ ಶೇ 30–40ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಬಡವರ ಬದುಕಿಗೆ ಬರೆ ಎಳೆದಿದೆ. ಮನುಷ್ಯತ್ವವೇ ಇಲ್ಲದ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಉಳಿಗಾಲವಿಲ್ಲ, ಬೇಸತ್ತಿರುವ ಜನರು ಶೀಘ್ರವೇ ರಾಜ್ಯ ಸರ್ಕಾರವನ್ನು ಕಿತ್ತು ಹಾಕಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಚಂದ್ರವಳ್ಳಿ ವೃತ್ತದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಅನಿಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರು ನಿತ್ಯವೂ ಧಿಕ್ಕಾರ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತೆರಳಿದ್ದರು. ಅವರು ಅಲ್ಲಿ ಮಾಡಿದ್ದೇನು? ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳುವ ಮೂಲಕ ತಮ್ಮ ಖಾಲಿ ಜೇಬು ಪ್ರದರ್ಶನ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುವ ಕಾಲ ಹತ್ತಿರವಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಗೊಂದಲ, ಗದ್ದಲ ಸೃಷ್ಟಿ ಮಾಡಿ ತಾವು ಪ್ರಧಾನಿ ಆಗಬೇಕು ಎಂಬ ಕನಸು ಕಾಣುತ್ತಿದ್ದಾರೆ’ ಎಂದು ಹೇಳಿದರು.
‘ದೇಶದಲ್ಲಿ ತುರ್ತು ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. 1975ರಲ್ಲಿ ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಯಾರೂ ಮರೆತಿಲ್ಲ. ಕಾಂಗ್ರೆಸ್ ಸರ್ಕಾರ ದೇಶದ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಅಪಚಾರ ಎಸಗಿದೆ. ವಿಶ್ವನಾಯಕ ನರೇಂದ್ರ ಮೋದಿ ಅವರು ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅದನ್ನು ಸಹಿಸಲು ಸಾಧ್ಯವಾಗದ ರಾಹುಲ್ ಗಾಂಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದರು.
‘ಇವಿಎಂ ಮೇಲೆ ಕಾಂಗ್ರೆಸ್ ನಾಯಕರಿಗೆ ಅನುಮಾನ. ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಿತು. ಅದರಲ್ಲೂ ಕಾಂಗ್ರೆಸ್ ಗೆಲುವು ಕಾಣಲಿಲ್ಲ. ಬ್ಯಾಲೆಟ್ ಮೂಲಕವೂ ಜನರು ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದಾರೆ. ಮುಂದೆ 2028ರಲ್ಲಿ ಎನ್ಡಿಎ ಸರ್ಕಾರ ಬರಲಿದ್ದು ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್ಚಂದ್ರ ದ್ವಿವೇದಿ ಮಾತನಾಡಿ, ‘ಕಾಂಗ್ರೆಸ್ ಮುಖಂಡರಿಗೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ. ನಿಯಮಿತವಾಗಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ತಡೆಯಲು ಕಾಂಗ್ರೆಸ್ ಮುಖಂಡರು ಯತ್ನಿಸುತ್ತಿದ್ದಾರೆ. ಚುನಾವಣಾ ಆಯೋಗದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ದೇಶಕ್ಕೆ ಕಾಂಗ್ರೆಸ್ ಅಪಾಯಕಾರಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಚಂಡ ಗೆಲುವಿನೊಂದಿಗೆ ಅಧಿಕಾರ ಹಿಡಿದಿದ್ದಾರೆ. ವಿಶ್ವದಲ್ಲಿ ಭಾರತ ದೇಶವೆಂದರೆ ಒಂದು ಘನತೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಮುಖಂಡರಿಗೆ ಆಗುತ್ತಿಲ್ಲ. ಜನರ ದಿಕ್ಕು ತಪ್ಪಿಸಿ ಅಧಿಕಾರ ಹಿಡಿಯುವ ಅವರ ಪ್ರಯತ್ನ ಸೋಲುತ್ತದೆ’ ಎಂದು ಹೇಳಿದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ‘ದೇಶದಾದ್ಯಂತ ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗೆ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಮುಖಂಡರು ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುತ್ತಾರೆ. ಆದರೆ ನಿತ್ಯವೂ ಅವರ ಸಂವಿಧಾನಕ್ಕೆ ಅಪಚಾರ ಎಸಗುತ್ತಾ ಬಂದಿದ್ದಾರೆ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ದೇಶದಲ್ಲಿ ಯುದ್ಧ ಇರಲಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕೆ.ಎಂ.ಸುರೇಶ್, ಮುಖಂಡರಾದ ಜಿ.ಎಂ.ಸಿದ್ದೇಶ್ವರ, ಶಿವಯೋಗಿ ಸ್ವಾಮಿ, ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಎಸ್.ವಿ. ರಾಮಚಂದ್ರ, ನೆರ್ಲಗುಂಟೆ ತಿಪ್ಪೇಸ್ವಾಮಿ, ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನಪ್ಪ, ಜ್ಯೋತಿ ಗಣೇಶ್, ಕೆ.ಟಿ.ಕುಮಾರಸ್ವಾಮಿ, ಜಿ.ಎಚ್.ಮೋಹನ್ ಕುಮಾರ್ ಇದ್ದರು.
ಸುಡು ಬಿಸಿಲಲ್ಲೂ ಹೆಜ್ಜೆ ಹಾಕಿದ ಮುಖಂಡರು
‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ’ ಅಭಿಯಾನದ ಅಂಗವಾಗಿ ಬಿಜೆಪಿ ಮುಖಂಡರು, ಉರಿಯುವ ಬಿಸಿಲಿನಲ್ಲೇ ಹೆಜ್ಜೆ ಹಾಕಿದರು.
ನಗರದ ಚಂದ್ರವಳ್ಳಿ ಸರ್ಕಲ್ನಲ್ಲಿ ಅಭಿಯಾನ ಆರಂಭವಾಗುವ ಹೊತ್ತಿಗೆ ಮಧ್ಯಾಹ್ನ 12.30 ಆಗಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಹರೀಶ್ಚಂದ್ರ ದ್ವಿವೇದಿ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ಮುಖಂಡರು ತೆರೆದ ವೇದಿಕೆಯಲ್ಲೇ ಬಿಸಿಲನ್ನು ಲೆಕ್ಕಿಸದೇ ಒಂದು ಗಂಟೆ ಭಾಷಣ ಮಾಡಿದರು. ಕಾರ್ಯಕರ್ತರು, ಸಾರ್ವಜನಿಕರು ಕೂಡ ಬಿಸಿಲಿನಲ್ಲೇ ಕುಳಿತಿದ್ದರು.
ಮಧ್ಯಾಹ್ನ 1.30ಕ್ಕೆ ಆರಂಭವಾದ ಪಾದಯಾತ್ರೆ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಸಾಗಿ ಒನಕೆ ಓಬವ್ವ ವೃತ್ತದಲ್ಲಿ ಕೊನೆಗೊಂಡಿತು.
‘ಕೈ ಎತ್ತಿಸಿ ಪ್ರಧಾನಿಯಾಗುವ ಕನಸು’
ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ಪ್ರಧಾನಿಯಾಗುವ ಹಂಬಲದಿಂದ ರಾಹುಲ್ ಗಾಂಧಿ ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಿ ತಾವು ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆಯೇ ಇಲ್ಲದೇ ಕೈ ಎತ್ತಿಸಿ ಪ್ರಧಾನಿ ಆಗಬೇಕು ಎಂಬ ಕನಸಿನಲ್ಲಿ ರಾಹುಲ್ ಗಾಂಧಿ ಇದ್ದಾರೆ’ ಎಂದು ಟೀಕಿಸಿದರು.
‘ಸಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಮುಖಂಡರಿಗೆ ನಂಬಿಕೆ ಇಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಚುನಾವಣಾ ವ್ಯವಸ್ಥೆಯ ಮೇಲೂ ಅವರಿಗೆ ವಿಶ್ವಾಸ ಇಲ್ಲವಾಗಿದೆ. ದೇಶದಲ್ಲಿ 12 ಬಾರಿ ಎಸ್ಐಆರ್ ನಡೆದಿದೆ. 10 ಪ್ರಕ್ರಿಯೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಡೆದಿದೆ. ಇಷ್ಟಾದರೂ ಅವರಿಗೆ ಎಸ್ಐಆರ್ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದರು.

261105-44-2085726457

