ಬೆಂಗಳೂರು, ನವೆಂಬರ್ 5: ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದನ್ನು ನೆನಪಿಸುವಂತಹ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರು ಕೋರಮಂಗಲದ ಪಬ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದೇ ಆಕೆಗೆ ಮುಳುವಾಗಿದೆ. ಆರೋಪಿಯು ಆಕೆಯನ್ನು ಹೋಟೆಲ್ ಕೊಠಡಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಸದ್ಯ, ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಸಮೀರ್ ಎಂಬ ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಲೈಟರ್ ಕೇಳಿದಾಗ ಆದ ಪರಿಚಯ

ಪೊಲೀಸ್ ದೂರಿನ ಪ್ರಕಾರ, ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿ ಕೋರಮಂಗಲದ ಪಬ್‌ಗೆ ತೆರಳಿದ್ದರು. ಈ ವೇಳೆ ಸಿಗರೇಟ್ ಸೇದಲು ಸಮೀರ್ ಬಳಿ ಲೈಟರ್ ಕೇಳಿದ್ದರು. ಲೈಟರ್ ನೀಡಿದ ಆರೋಪಿ, ಬಳಿಕ ಯುವತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಮಾತುಗಳ ಮೂಲಕ ಯುವತಿಯನ್ನು ಸೆಳೆದು ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಸಮೀರ್, ನಂತರ ಆಕೆಯನ್ನು ಮಡಿವಾಳದ ಹೋಟೆಲ್‌ನ ಕೊಠಡಿಗೆ ಆಹ್ವಾನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಶೆಯಲ್ಲಿದ್ದ ಯುವತಿಯ ಮೇಲೆ ಅತ್ಯಾಚಾರ ಆರೋಪ

ಹೋಟೆಲ್ ಕೊಠಡಿಯಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಆರೋಪಿಯು ಯುವತಿಗೆ ನಶೆ ಬರುವಂತೆ ಕುಡಿಸಿ, ಆಕೆ ಕುಡಿದ ಮತ್ತಿನಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯ ನಂತರ ಯುವತಿ ಬೆಳಗಿನ ಜಾವ ಹೋಟೆಲ್‌ನಿಂದ ಹೊರಬಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಸಮೀರ್‌ನನ್ನು ಬಂಧಿಸಿದ್ದಾರೆ.

ಆರೋಪಿ ಪರಪ್ಪನ ಅಗ್ರಹಾರ ಜೈಲಿಗೆ

ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ