ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎನ್ನಲಾದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರ ಮುಂದೆ ಧನ್ವೀರ್ ಸಾಕ್ಷ್ಯ ನಾಶ ಮಾಡಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಸಿಬಿ ಟೀಂ ಸಜ್ಜಾಗಿದೆ.

ಎಫ್​​ಎಸ್​ಎಲ್ ರಿಪೋರ್ಟ್‌ನಲ್ಲಿ ರಹಸ್ಯ ಬಯಲು

ಈ ಹಿಂದೆ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಧನ್ವೀರ್‌ ಬಳಿಯಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು. ಸದ್ಯ ಆ ಎಫ್‌ಎಸ್‌ಎಲ್ ವರದಿ ಸಿಸಿಬಿ ಪೊಲೀಸರ ಕೈಸೇರಿದ್ದು, ಅದರಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ತನಿಖೆ ವೇಳೆ ಧನ್ವೀರ್ ತಮ್ಮ ಮೊಬೈಲ್ ಫೋನ್ ಅನ್ನು ಸಂಪೂರ್ಣ ‘ಫ್ಯಾಕ್ಟರಿ ರಿಸೆಟ್’ ಮಾಡಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಜೈಲಿನ ವೈರಲ್ ವಿಡಿಯೋಗಳು, ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖ ವಾಟ್ಸಾಪ್ ಚಾಟ್‌ಗಳು ಹಾಗೂ ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದರು ಎಂಬಿತ್ಯಾದಿ ನಿರ್ಣಾಯಕ ಡಿಜಿಟಲ್ ಸಾಕ್ಷ್ಯಗಳನ್ನು ಡಿಲೀಟ್ ಮಾಡಿ ಸಾಕ್ಷ್ಯನಾಶಕ್ಕೆ ಯತ್ನಿಸಿರುವುದು ಸಾಬೀತಾಗಿದೆ.

ವಕೀಲರ ಹೇಳಿಕೆಯಿಂದ ಟ್ವಿಸ್ಟ್

ವಿಚಾರಣೆ ವೇಳೆ ಧನ್ವೀರ್, ‘ನನಗೆ ಈ ಜೈಲಿನ ವಿಡಿಯೋಗಳನ್ನು ವಕೀಲರೊಬ್ಬರು ಕಳುಹಿಸಿದ್ದರು’ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸಿಸಿಬಿ ಪೊಲೀಸರು ಸಂಬಂಧಪಟ್ಟ ವಕೀಲರನ್ನು ಕರೆಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ ವಕೀಲರು, ‘ನಾನು ಧನ್ವೀರ್‌ಗೆ ಯಾವುದೇ ವಿಡಿಯೋ ಶೇರ್ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಈಗ ಎಫ್‌ಎಸ್‌ಎಲ್ ವರದಿ ಮತ್ತು ವಕೀಲರ ಹೇಳಿಕೆ ಎರಡೂ ಧನ್ವೀರ್‌ಗೆ ವಿರುದ್ಧವಾಗಿದ್ದು, ನಟ ಪೊಲೀಸರ ಮುಂದೆ ಸುಳ್ಳು ಹೇಳಿರುವುದು ಸಾಬೀತಾಗಿದೆ.

ಮತ್ತೆ ನೋಟಿಸ್ ನೀಡಲು ಸಿಸಿಬಿ ತಯಾರಿ

ಧನ್ವೀರ್ ಸಾಕ್ಷ್ಯ ನಾಶಪಡಿಸಿರುವ ಕುರಿತು ಸಿಸಿಬಿ ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ. ಸಾಕ್ಷ್ಯ ನಾಶಪಡಿಸಿದ ಹಿನ್ನೆಲೆಯಲ್ಲಿ ಮುಂದಿನ ಕಠಿಣ ಕ್ರಮ ಜರುಗಿಸಲು ಕೋರ್ಟ್‌ಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆಗೆ ನಟ ಧನ್ವೀರ್‌ಗೆ ಮತ್ತೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಕರೆಸಲು ಸಿಸಿಬಿ ಟೀಂ ಮುಂದಾಗಿದೆ.

ಇದನ್ನೂ ಓದಿ: ನಟ ಧನ್ವೀರ್ ವಿರುದ್ಧ ಕೋರ್ಟ್​​ನಲ್ಲಿ ಮಾನನಷ್ಟ ದೂರು ದಾಖಲು ಮಾಡಿದ ವಿಜಯಲಕ್ಷ್ಮಿ

ಏನಿದು ಪ್ರಕರಣ?

ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಶಂಕಿತ ಉಗ್ರ ತರುಣ್, ಉಮೇಶ್ ರೆಡ್ಡಿ ಸೇರಿದಂತೆ ಮೂವರು ಕೈದಿಗಳು ಮೊಬೈಲ್ ಬಳಸುತ್ತಾ, ಡ್ಯಾನ್ಸ್ ಮಾಡುತ್ತಾ ರಾಜಾತಿಥ್ಯ ಅನುಭವಿಸುತ್ತಿದ್ದ ವಿಡಿಯೋಗಳು ವೈರಲ್ ಆಗಿ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲಿನ ಈ ವಿಡಿಯೋಗಳನ್ನು ನಟ ಧನ್ವೀರ್ ಅವರೇ ವೈರಲ್ ಮಾಡಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಎಫ್‌ಎಸ್‌ಎಲ್ ವರದಿ ಬಂದ ಬೆನ್ನಲ್ಲೇ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.