‘ಪ್ರೇಮಲು’ ಸಿನಿಮಾ ಖ್ಯಾತಿಯ ಮಮಿತಾ ಬೈಜು ಸದ್ಯ ದಕ್ಷಿಣ ಭಾರತದ ಅತಿ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಇವರು ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡು ಮಾಡುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಭಾಗವಹಿಸಿದ್ದ 25 ವರ್ಷದ ಮಮಿತಾ, ತಮ್ಮ ವೈಯಕ್ತಿಕ ಜೀವನ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಹಲವು ಆಸಕ್ತಿಕರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ತಮಗೆ ಸುಲಭವಾಗಿ ಯಾರ ಮೇಲೂ ಕ್ರಶ್ ಆಗುವುದಿಲ್ಲ ಎಂದು ಮಮಿತಾ ಹೇಳಿದ್ದಾರೆ. ಜನರನ್ನು ನೋಡಿದ ತಕ್ಷಣ ಪ್ರೀತಿ ಹುಟ್ಟುವುದು ಬಹಳ ಅಪರೂಪ. ಯಾರನ್ನಾದರೂ ಭೇಟಿಯಾದಾಗ ಅವರೊಡನೆ ಮಾತನಾಡಿದ ಮೇಲಷ್ಟೇ ಅವರ ವ್ಯಕ್ತಿತ್ವವನ್ನು ಅಳೆಯುತ್ತೇನೆ. ಜನರನ್ನು ತಮಗೆ ತೀರಾ ಹತ್ತಿರವಾಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನರೊಂದಿಗೆ ಸುಲಭವಾಗಿ ಬೆರೆಯದಿದ್ದರೂ ತಮಗೂ ಒಂದು ಸುಂದರ ಸಂಬಂಧದಲ್ಲಿ ಇರಬೇಕೆಂಬ ಆಸೆ ಇದೆ ಎಂದಿದ್ದಾರೆ. ಈಗ ಇಲ್ಲದಿದ್ದರೆ ಇನ್ನೆಂದಿಗೂ ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ ಎಂಬ ಭಾವನೆ ತಮ್ಮಲ್ಲಿದೆ. ಪ್ರಸ್ತುತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ, ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂಬ ಸುಳಿವನ್ನು ಅವರು ಕೊಟ್ಟಿದ್ದಾರೆ.
2026ರ ವರ್ಷ ಮಮಿತಾ ಬೈಜು ಪಾಲಿಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಿದೆ. ಈ ವರ್ಷದಲ್ಲಿ ಅವರು ನಟಿಸಿದ ಸಿನಿಮಾಗಳು ಜಾಗತಿಕವಾಗಿ ಬರೋಬ್ಬರಿ 919 ಕೋಟಿ ರೂಪಾಯಿ ಗಳಿಸಿವೆ. ‘ಜನ ನಾಯಗನ್’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ನಂತಹ ಸೂಪರ್ ಹಿಟ್ ಸಿನಿಮಾಗಳು ಇವರ ಯಶಸ್ಸಿನ ಗ್ರಾಫ್ ಹೆಚ್ಚಿಸಿವೆ.
ಇದನ್ನೂ ಓದಿ: ಬಾಲಿವುಡ್ಗೆ ಕಾಲಿಡಲಿದ್ದಾರೆ ದಕ್ಷಿಣ ಭಾರತದ ಸೆನ್ಸೇಷನ್ ನಟಿ ಮಮಿತಾ ಬೈಜು
ಇತ್ತೀಚೆಗೆ ತೆರೆಕಂಡ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಚಿತ್ರವು ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಚಿತ್ರವು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಸದ್ಯ ಇವರು ಧನುಷ್ ಮತ್ತು ಸೂರ್ಯ ಅವರಂತಹ ಸ್ಟಾರ್ ನಟರ ಜೊತೆ ಅಭಿನಯಿಸಿ ಬಾಕ್ಸ್ ಆಫೀಸ್ ಕ್ವೀನ್ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

