ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ದೇಶಾದ್ಯಂತ ತೆರೆಕಂಡಿದ್ದು, ಬೆಂಗಳೂರಿನ ಸಂತೋಷ್ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದ್ದು, ಸಾವಿರಾರು ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್ ಮುಂದೆ ಜಮಾಯಿಸಿದ್ದರು.

ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೃಹತ್ ಕಟೌಟ್‌ಗಳನ್ನು ಅಳವಡಿಸಿ, ಹೂವಿನಿಂದ ಅಲಂಕರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಥಿಯೇಟರ್ ಮುಂಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಯೊಬ್ಬರು ಮಾತನಾಡಿ, ‘ಯಶ್ ಅವರನ್ನು ನಾವು ಪ್ರೇಮಿಯಾಗಿ ಅಥವಾ ಮಾಸ್ ಹೀರೋ ಆಗಿ ನೋಡಿದ್ದೇವೆ. ಆದರೆ, ರಾವಣನಂತಹ ವಿಭಿನ್ನ ಪಾತ್ರದಲ್ಲಿ ಅವರನ್ನು ನೋಡಲು ಕುತೂಹಲದಿಂದ ಬಂದಿದ್ದೇವೆ’ ಎಂದು ತಿಳಿಸಿದರು. ಯಶ್ ಅವರ ಈ ಹೊಸ ಪ್ರಯತ್ನದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಯಶ್ ರಾವಣನ ಪಾತ್ರವನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.