ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಮ್ಮ ಮನೆಯ ಹೊರಭಾಗದಲ್ಲಿ ಅಥವಾ ಬಾಲ್ಕನಿಯಲ್ಲಿ ಬಣ್ಣಬಣ್ಣದ, ಹೊಳೆಯುವ ಲೈಟ್ಗಳನ್ನು ಹಾಕಿ ಮನೆ ಅಲಂಕರಿಸುತ್ತಾರೆ. ಆದರೆ ಲೈಟ್ ಖರೀದಿಸುವಾಗ ಮಾಡುವ ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕಳಪೆ ಗುಣಮಟ್ಟದ ಲೈಟ್ಗಳಿಂದ ಶಾರ್ಟ್ ಸರ್ಕ್ಯೂಟ್, ವಿದ್ಯುತ್ ಶಾಕ್ ಮತ್ತು ಬೆಂಕಿ ಅವಘಡ ಸಂಭವಿಸುವ ಅಪಾಯವಿರುತ್ತದೆ. ಹೀಗಾಗಿ ಹಬ್ಬದ ಸಂಭ್ರಮದ ನಡುವೆ ಯಾವುದೇ ತೊಂದರೆ ಉಂಟಾಗದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ.
ಲೈಟ್ ಖರೀದಿಸುವಾಗ ಎಚ್ಚರಿಕೆ ಇರಲಿ
ಮನೆ ಅಲಂಕರಿಸಲು ಹಲವರು ಕಡಿಮೆ ಬೆಲೆಯ ಲೈಟ್ಗಳನ್ನು ಖರೀದಿಸುತ್ತಾರೆ. ಆದರೆ ಕಡಿಮೆ ಬೆಲೆಯ ಲೈಟ್ ಖರೀದಿಸುವುದಷ್ಟೇ ಸಮಸ್ಯೆಯಲ್ಲ. ಅದರ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆಯೂ ಗಮನಹರಿಸುವುದು ಮುಖ್ಯ. ಕಳಪೆ ಗುಣಮಟ್ಟದ ಲೈಟ್ಗಳು ಕೆಲವೇ ದಿನಗಳಲ್ಲಿ ಕೆಟ್ಟುಹೋಗಬಹುದು. ಹೀಗಾಗಿ ಲೈಟ್ ಖರೀದಿಸುವಾಗ ಅದರ ಪ್ಯಾಕೆಟ್ ಮೇಲಿರುವ ಸುರಕ್ಷತಾ ಪ್ರಮಾಣೀಕರಣ ಮತ್ತು ಅಗತ್ಯ ಮಾಹಿತಿಯನ್ನು ಪರಿಶೀಲಿಸಿ. ಯಾವುದೇ ಮಾಹಿತಿ ಇಲ್ಲದ ಲೈಟ್ಗಳನ್ನು ಖರೀದಿಸುವುದನ್ನು ತಪ್ಪಿಸಿ.
ಲೈಟ್ಗಳನ್ನು ಸರಿಯಾಗಿ ಪರಿಶೀಲಿಸಿ
ಲೈಟ್ ಖರೀದಿಸಲು ಹೋದಾಗ ಅದನ್ನು ಸರಿಯಾಗಿ ಪರಿಶೀಲಿಸಿ. ಅದರಲ್ಲೂ ವೈರ್ಗಳು, ಪ್ಲಗ್ ಮತ್ತು ಕನೆಕ್ಷನ್ಗಳ ಬಗ್ಗೆ ಹೆಚ್ಚು ಗಮನ ಕೊಡಿ. ವೈರ್ಗಳು ತುಂಬಾ ತೆಳುವಾಗಿದ್ದರೆ, ಕಟ್ ಆಗಿದ್ದರೆ ಅಥವಾ ಎಲ್ಲಿಯಾದರೂ ಕವಚ ಕಿತ್ತು ಒಳಗಿನ ತಂತಿ ಕಾಣುತ್ತಿದ್ದರೆ ಅಂತಹ ಲೈಟ್ಗಳನ್ನು ಖರೀದಿಸಬೇಡಿ. ಹಳೆಯ ಲೈಟ್ಗಳನ್ನು ಬಳಸುತ್ತಿದ್ದರೆ, ಅವುಗಳನ್ನೂ ಮೊದಲೇ ಪರಿಶೀಲಿಸಿಕೊಳ್ಳಿ. ವೈರ್ಗಳಲ್ಲಿ ದೋಷವಿದ್ದರೆ ವಿದ್ಯುತ್ ಶಾಕ್ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಅಪಾಯವಿರುತ್ತದೆ. ಹಾಗಾಗಿ ಲೈಟ್ ಅಳವಡಿಸುವ ಮೊದಲು ಅದರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಿ.
ಎಕ್ಸ್ಟೆನ್ಷನ್ ಕಾರ್ಡ್ ಮೇಲೆ ಹೆಚ್ಚು ಲೋಡ್ ಹಾಕಬೇಡಿ
ಮನೆ ಅಲಂಕಾರ ಮಾಡುವಾಗ ಹಲವರು ಒಂದೇ ಎಕ್ಸ್ಟೆನ್ಷನ್ ಬೋರ್ಡ್ಗೆ ಹಲವು ಲೈಟ್ಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಕನೆಕ್ಟ್ ಮಾಡುತ್ತಾರೆ. ಇದರಿಂದ ಬೋರ್ಡ್ ಮೇಲೆ ಹೆಚ್ಚಿನ ಹೊರೆ ಬೀಳಬಹುದು. ಪರಿಣಾಮವಾಗಿ ಅದು ಹೆಚ್ಚು ಬಿಸಿಯಾಗುವ ಅಥವಾ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಅಪಾಯವಿರುತ್ತದೆ. ಹೀಗಾಗಿ ಒಂದೇ ಬೋರ್ಡ್ಗೆ ಅಗತ್ಯಕ್ಕಿಂತ ಹೆಚ್ಚು ಪ್ಲಗ್ಗಳನ್ನು ಹಾಕಬೇಡಿ. ಎಕ್ಸ್ಟೆನ್ಷನ್ ಕಾರ್ಡ್ ಬಳಸುವ ಅಗತ್ಯವಿದ್ದರೆ ಉತ್ತಮ ಗುಣಮಟ್ಟದ ಕಾರ್ಡ್ ಬಳಸಿ. ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ವಿದ್ಯುತ್ ಉಪಕರಣಗಳನ್ನು ಕನೆಕ್ಟ್ ಮಾಡಿ.
ರಾತ್ರಿ ಇಡೀ ಲೈಟ್ ಆನ್ ಇಡುವುದು ಅಪಾಯಕಾರಿ
ದೀಪಾವಳಿ ಸಂದರ್ಭದಲ್ಲಿ ಮನೆಯ ಬಾಲ್ಕನಿ ಮತ್ತು ಟೆರೇಸ್ಗಳಲ್ಲಿ ಹಾಕಿರುವ ಲೈಟ್ಗಳನ್ನು ಆಫ್ ಮಾಡಲು ಹಲವರು ಮರೆತುಬಿಡುತ್ತಾರೆ. ಇದರಿಂದ ಲೈಟ್ಗಳು ರಾತ್ರಿ ಇಡೀ ಆನ್ ಆಗಿಯೇ ಇರುತ್ತವೆ. ಆದರೆ ಹೀಗೆ ಮಾಡುವುದು ಅಪಾಯಕಾರಿ. ಅದರಲ್ಲೂ ಲೈಟ್ನ ಗುಣಮಟ್ಟ ಕಳಪೆಯಾಗಿದ್ದರೆ ಅಥವಾ ವೈರ್ಗಳಲ್ಲಿ ಸಮಸ್ಯೆಯಿದ್ದರೆ ಅಪಾಯ ಹೆಚ್ಚಾಗಬಹುದು.
ಒದ್ದೆ ಕೈಗಳಿಂದ ಲೈಟ್ ಮುಟ್ಟಬೇಡಿ
ದೀಪಾವಳಿ ಸಂದರ್ಭದಲ್ಲಿ ಮನೆ ಸ್ವಚ್ಛಗೊಳಿಸುವಾಗ ಅಥವಾ ಮಳೆಯ ನಂತರ ಲೈಟ್ಗಳು ಮತ್ತು ಅವುಗಳ ಕನೆಕ್ಷನ್ಗಳು ಒದ್ದೆಯಾಗಬಹುದು. ಇಂತಹ ಸಂದರ್ಭದಲ್ಲಿ ಒದ್ದೆ ಕೈಗಳಿಂದ ಲೈಟ್ ಅಥವಾ ಪ್ಲಗ್ ಮುಟ್ಟುವುದು ಅಪಾಯಕಾರಿ. ಇದರಿಂದ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ.

