ಬೆಂಗಳೂರು: ಖಾಸಗಿ ಪಾಠ (ಟ್ಯುಟೋರಿಯಲ್‌) ಮತ್ತು ತರಬೇತಿ ಕೇಂದ್ರಗಳ (ಕೋಚಿಂಗ್‌) ಚಟುವಟಿಕೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.

ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರ ‘ಕರ್ನಾಟಕ ಟ್ಯುಟೋರಿಯಲ್‌ ಸಂಸ್ಥೆಗಳು ಅಥವಾ ಕೋಚಿಂಗ್‌ ಕೇಂದ್ರಗಳ ನೋಂದಣಿ ಮತ್ತು ನಿಯಂತ್ರಣ ನಿಯಮಗಳು–2026’ ಕರಡು ಪ್ರಕಟಿಸಿದೆ.

ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿರುವ ಕರಡು ನಿಯಮದ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ 10ನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಟ್ಯುಟೋರಿಯಲ್‌ ಮತ್ತು ಕೋಚಿಂಗ್‌ ಕೇಂದ್ರಗಳಿಗೆ ದಾಖಲಿಸಿಕೊಳ್ಳುವಂತಿಲ್ಲ. ರಾಜ್ಯದ ಎಲ್ಲ ಕೇಂದ್ರಗಳ ನೋಂದಣಿ ಕಡ್ಡಾಯವಾಗಲಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಆನ್‌ಲೈನ್‌ ಮೂಲಕ ಬೋಧನೆ ನೀಡುವ ಕೇಂದ್ರಗಳಿಗೂ ಈ ನಿಯಮಗಳು ಅನ್ವಯಿಸಲಿವೆ. ಇಂತಹ ಸಂಸ್ಥೆಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ₹15 ಸಾವಿರ ಶುಲ್ಕ ನಿಗದಿಪಡಿಸಲಾಗಿದ್ದು, ಪ್ರತಿ ಕೋರ್ಸ್‌ಗೆ ಪ್ರತ್ಯೇಕವಾಗಿ ₹5 ಸಾವಿರ ಪಾವತಿಸಬೇಕು. ನೋಂದಣಿ ಪ್ರಮಾಣಪತ್ರಕ್ಕೆ ವರ್ಷಗಳ ಅವಧಿ ನಿಗದಿ ಮಾಡಲಾಗಿದೆ.

ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕಒತ್ತಡ ತಗ್ಗಿಸಲು, ಪರೀಕ್ಷೆ, ಪುನರಾವರ್ತನೆ ಮತ್ತು ಸಂದೇಹ ನಿವಾರಣೆ ತರಗತಿಗಳನ್ನೂ ಒಳಗೊಂಡಂತೆ ದಿನವೊಂದಕ್ಕೆ ಗರಿಷ್ಠ ಐದು ಗಂಟೆಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆ ಅಥವಾ ಕಾಲೇಜುಗಳ ಅಧಿಕೃತ ವೇಳೆಯಲ್ಲಿ ಕೋಚಿಂಗ್‌ ತರಗತಿ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಉತ್ತಮ ಅಂಕಗಳು, ರ‍್ಯಾಂಕ್‌ ಭರವಸೆ ನೀಡುವುದು, ಪೋಷಕರು ಮತ್ತು ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸುವುದನ್ನೂ ನಿಷೇಧಿಸಲಾಗಿದೆ.

ಮಾನಸಿಕ ಆರೋಗ್ಯದ ಕಾಳಜಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಹಾಗೂ ಫಲಿತಾಂಶದ ಒತ್ತಡದಿಂದ ಉಂಟಾಗುವ ಮಾನಸಿಕ ಒತ್ತಡ ಮತ್ತು ಆತ್ಮಹತ್ಯೆಯಂತಹ ದುರಂತ ಘಟನೆಗಳನ್ನು ತಡೆಯಲು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲಾಗಿದ್ದು, ಕೇಂದ್ರಗಳು ಸಮಾಲೋಚಕರ ನೆರವು ಒದಗಿಸಬೇಕು. ಮಾನಸಿಕ ಆರೋಗ್ಯದ ಕಾರ್ಯಾಗಾರ ಆಯೋಜಿಸಬೇಕು. ತುರ್ತು ಸಂಪರ್ಕ ಸಂಖ್ಯೆಗಳು ಹಾಗೂ ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ.

ನಿಯಮ ಉಲ್ಲಂಘನೆಗೆ ₹ 5 ಲಕ್ಷ ದಂಡ

ನಿಯಮಗಳ ಪಾಲನೆ ಪರಿಶೀಲಿಸಲು ಹಾಗೂ ದೂರುಗಳ ವಿಚಾರಣೆ ನಡೆಸಲು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸುವುದಾಗಿ ಉಲ್ಲೇಖಿಸಲಾಗಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ₹5 ಲಕ್ಷದವರೆಗೆ ದಂಡ ವಿಧಿಸುವುದು ಅಥವಾ ಅವುಗಳ ನೋಂದಣಿಯನ್ನು ರದ್ದುಪಡಿಸುವ ಅವಕಾಶವಿದೆ. ಮೇಲ್ಮನವಿ ಪ್ರಾಧಿಕಾರಕ್ಕೂ ಈ ಸಂಬಂಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.

ಶಾಲೆ ಅಥವಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು, ಹೆಚ್ಚಿನ ಸಮಯವನ್ನು ಕೋಚಿಂಗ್‌ ಕೇಂದ್ರಗಳಲ್ಲಿ ಕಳೆಯುವ ಸಂಯೋಜಿತ ತರಬೇತಿ ಪದ್ಧತಿಗೆ ಕಡಿವಾಣ ಹಾಕುವುದು, ಶಾಲೆ ಮತ್ತು ಕಾಲೇಜುಗಳ ಅಧಿಕೃತ ವೇಳೆಯಲ್ಲಿ ಕೋಚಿಂಗ್‌ ತರಗತಿ ನಡೆಸುವುದು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಕಾಯಂ ಶಿಕ್ಷಕರು ಮತ್ತು ಉಪನ್ಯಾಸಕರು ಕೋಚಿಂಗ್‌ ಕೇಂದ್ರಗಳಲ್ಲಿ ಬೋಧನೆ ಮಾಡುವುದನ್ನು ನಿಷೇಧಿಸಲಾಗಿದೆ.

261031-32-903297680