ಇಂಡಿಯನ್ ಪ್ರೀಮಿಯರ್ ಲೀಗ್ 2027 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯ ಉತ್ತರ ರೋಹಿತ್ ಶರ್ಮಾ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಲು ಮುಂದಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಳೆದ ಸೀಸನ್ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಫ್ರಾಂಚೈಸಿಯನ್ನು ಮತ್ತೆ ಹಳಿಗೆ ತರಲು ಮ್ಯಾನೇಜ್ಮೆಂಟ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಿಲಕ್ ವರ್ಮಾ ಹೆಸರು ಹೇಳಿದ್ದ ರೋಹಿತ್ ಶರ್ಮಾ!
ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ಭವಿಷ್ಯದ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿತ್ತು. ಈ ವೇಳೆ ರೋಹಿತ್ ಶರ್ಮಾ ಅವರು ಭವಿಷ್ಯದ ದೃಷ್ಟಿಯಿಂದ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ನಾಯಕನನ್ನಾಗಿ ಬೆಳೆಸುವಂತೆ ಮ್ಯಾನೇಜ್ಮೆಂಟ್ಗೆ ಮೊದಲು ಸಲಹೆ ನೀಡಿದ್ದರು. ಯುವ ಆಟಗಾರನಿಗೆ ನಾಯಕತ್ವ ನೀಡಿ, ತಾವು ಮಾರ್ಗದರ್ಶಕರಾಗಿ ಬೆಂಬಲ ನೀಡಲು ರೋಹಿತ್ ಉತ್ಸುಕರಾಗಿದ್ದರು.
ಫ್ರಾಂಚೈಸಿ ಮನವಿಗೆ ಒಪ್ಪಿದ ‘ಹಿಟ್ಮ್ಯಾನ್’:
ಆದರೆ, ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ತಂಡವನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು 5 ಬಾರಿಯ ಐಪಿಎಲ್ ಟ್ರೋಫಿ ವಿಜೇತ ನಾಯಕನೇ ಸೂಕ್ತ ಎಂದು ಬಲವಾಗಿ ನಂಬಿತ್ತು. ಹೀಗಾಗಿ, ರೋಹಿತ್ ಅವರೇ ಮತ್ತೆ ತಂಡದ ಚುಕ್ಕಾಣಿ ಹಿಡಿಯಬೇಕು ಎಂದು ಫ್ರಾಂಚೈಸಿ ವಿಶೇಷ ಮನವಿ ಮಾಡಿಕೊಂಡಿತ್ತು. ನ್ಯೂಝಿಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಸರಣಿ ಮಾತುಕತೆಗಳ ಬಳಿಕ, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಅನ್ನು ಮತ್ತೆ ಮುನ್ನಡೆಸಲು ಹಸಿರು ನಿಶಾನೆ ತೋರಿದ್ದಾರೆ ಎಂದು ವರದಿಯಾಗಿದೆ.
ಕೋಚಿಂಗ್ ಸ್ಟಾಫ್ ನೇಮಕದಲ್ಲೂ ರೋಹಿತ್ ಪಾತ್ರ:
ಮುಂಬೈ ಇಂಡಿಯನ್ಸ್ ತನ್ನ ಕೋಚಿಂಗ್ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸುತ್ತಿದ್ದು, ಕೀರನ್ ಪೊಲಾರ್ಡ್, ರಾಬಿನ್ ಉತ್ತಪ್ಪ ಮತ್ತು ಮಿಚೆಲ್ ಮೆಕ್ಲೆನಗನ್ ಅವರಂತಹ ಮಾಜಿ ಆಟಗಾರರಿಗೆ ಕೋಚಿಂಗ್ ಜವಾಬ್ದಾರಿ ವಹಿಸಿದ್ದಾರೆ. ಈ ಹೊಸ ಕೋಚಿಂಗ್ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯಲ್ಲೂ ರೋಹಿತ್ ಶರ್ಮಾ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಾಂಡ್ಯ ಭವಿಷ್ಯವೇನು?
ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನ ಪಡೆದಿದ್ದರಿಂದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ‘ಟ್ರೇಡ್’ ಮಾಡಲಾಗುತ್ತದೆಯೇ ಅಥವಾ ಅವರು ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಕೇವಲ ಆಟಗಾರನಾಗಿ ಮುಂದುವರಿಯುತ್ತಾರೆಯೇ ಎಂಬುದೇ ಸದ್ಯದ ಕುತೂಹಲ.
ಇದನ್ನೂ ಓದಿ: ಹೊಸ ವಿಶ್ವ ದಾಖಲೆ: 6 ಓವರ್ಗಳಲ್ಲಿ 159 ರನ್ ಚಚ್ಚಿದ ಆಸ್ಟ್ರೇಲಿಯಾ
ಒಟ್ಟಿನಲ್ಲಿ, ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕರಾಗಿ ಮರಳುತ್ತಿರುವ ಸುದ್ದಿಯು ಕೋಟ್ಯಂತರ ಎಂಐ ಅಭಿಮಾನಿಗಳಲ್ಲಿ ಹೊಸ ಭರವಸೆ ಮತ್ತು ಸಡಗರವನ್ನು ತಂದಿದ್ದು, ಈ ಸುದ್ದಿಯು ಅಧಿಕೃತವಾಗಲಿ ಎಂದು ಆಶಿಸುತ್ತಿದ್ದಾರೆ. ಒಂದು ವೇಳೆ ಈ ವರದಿಗಳು ನಿಜವಾಗಿ ‘ಹಿಟ್ಮ್ಯಾನ್’ ಮರಳಿ ಚುಕ್ಕಾಣಿ ಹಿಡಿದಿದ್ದೇ ಆದಲ್ಲಿ, ಮುಂಬೈ ಇಂಡಿಯನ್ಸ್ ಮುಂಬರುವ ಸೀಸನ್ನಲ್ಲಿ ಮತ್ತೆ ತನ್ನ ಹಳೆಯ ವೈಭವ ಹಾಗೂ ವಿಜಯಯಾತ್ರೆಯನ್ನು ಮುಂದುವರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

