ಬೆಂಗಳೂರು: ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆಯನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.
ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಬೆಳಗಾವಿ ಜಿಲ್ಲೆಯ ಅಳಗವಾಡಿಯ, ‘ಮೆಸರ್ಸ್ ಆಸ್ಕಿನ್ಸ್ ಬಯೋ ಫ್ಯೂಯಲ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೆ ಅಸ್ಕಿ ಹಾಗೂ ‘ಮೆಸರ್ಸ್ ಶ್ರೀ ಬ್ರಹ್ಮಾನಂದಸಾಗರ ಜಾಗರಿ ಇಂಡಸ್ಟ್ರೀಸ್’ ಪಾಲುದಾರ ಮಹಾವೀರ್ ಜೆ ಅಸ್ಕಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಅನಿರುದ್ಧ ಆರ್ ನಾಯಕ್ ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್ ವಾದ ಮಂಡಿಸಿದರು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸಕ್ಕರೆ ಸಚಿವಾಲಯದ ನಿರ್ದೇಶಕ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
