ಬೆಂಗಳೂರು: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪ್ರಸ್ತುತ ಶೇ 46ರಷ್ಟು ನಗರ ಪ್ರದೇಶದಲ್ಲಿ ಇದ್ದು, 2047ರ ವೇಳೆಗೆ ಇದು ಶೇ 70ಕ್ಕೆ ಏರಿಕೆಯಾಗಲಿದೆ. ಇದರಿಂದ ನಗರ ಪ್ರದೇಶಗಳ ಮೇಲಿನ ಒತ್ತಡ ವಿಪರೀತ ಹೆಚ್ಚಾಗಲಿದೆ ಎಂದು ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ ವರದಿ ಅಂದಾಜಿಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಪ್ರಸ್ತುತ 6.9 ಕೋಟಿ ಇರುವ ರಾಜ್ಯದ ಜನಸಂಖ್ಯೆ 2047ರ ವೇಳೆಗೆ 7.7 ಕೋಟಿ– 7.8 ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದೂ ವರದಿ ಅಂದಾಜಿಸಿದೆ.

‘ನಗರ ಪ್ರದೇಶದಲ್ಲಿ ವಾಸಿಸುವವರ ಪ್ರಮಾಣ ಹೆಚ್ಚಾಗುವುದರಿಂದ ರಸ್ತೆ ಮತ್ತು ಜಲಮೂಲಗಳ ಮೇಲಿನ ಒತ್ತಡ ವಿಪರೀತ ಹೆಚ್ಚಾಗಲಿದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡರಷ್ಟೇ ನಿರ್ವಹಣೆ ಸುಲಭವಾಗಲಿದೆ. ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆ ರೂಪದ ಯೋಜನೆಗಳಿಂದ ಹೆಚ್ಚು ಉಪಯೋಗವಾಗುವುದಿಲ್ಲ’ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

‘ದಶಕದ ಹಿಂದೆ 70 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಈಗ 1.40 ಕೋಟಿಗೆ ಏರಿಕೆಯಾಗಿದೆ. ವಾಹನಗಳ ಸಂಖ್ಯೆ 1.35 ಕೋಟಿಯಷ್ಟಿದ್ದು, ಮುಂದಿನ ಎರಡು ದಶಕಗಳಲ್ಲಿ ಬೆಂಗಳೂರು ಜನ ಸಂಖ್ಯೆ 2 ಕೋಟಿ ದಾಟುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ರಸ್ತೆ ಮತ್ತಿತರ ಮೂಲಸೌಕರ್ಯ ಒದಗಿಸಬೇಕು. ಈಗ ಇರುವ ರಸ್ತೆ ಪ್ರಮಾಣವನ್ನು (ಶೇ 8) ಶೇ 18ಕ್ಕೆ ವಿಸ್ತರಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ನಗರಗಳು, ಉತ್ತಮ ರಸ್ತೆಗಳು ಮತ್ತು ಉತ್ತಮ ಜೀವನಮಟ್ಟ ಕಲ್ಪಿಸಬೇಕು’ ಎಂದು ವರದಿ ಹೇಳಿದೆ. 

‘ಶಿಕ್ಷಣ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿ ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಬರುತ್ತಿದ್ದಾರೆ. ನಗರಗಳಲ್ಲಿ ಉದ್ಯೋಗ ಮತ್ತು ಮೂಲಸೌಕರ್ಯ ಸಮರ್ಪಕವಾಗಿ ವಿಸ್ತರಣೆಯಾಗದಿದ್ದರೆ ಸಂಚಾರ ದಟ್ಟಣೆ, ವಸತಿ ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಕೆಲವು ಪ್ರದೇಶಗಳ ಜನಸಂಖ್ಯೆಯ ಗಮನಾರ್ಹ ಭಾಗ ನಗರಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳನ್ನೂ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಯೋಜಿತವಾಗಿ ಅಭಿವೃದ್ಧಿಪಡಿಸಬೇಕು’ ಎಂದು ವರದಿಯಲ್ಲಿ ವಿವರಿಸಲಾಗಿದೆ. 

‘ರಾಜ್ಯದ ನಗರಗಳ ಯೋಜಿತ ಬೆಳವಣಿಗೆಗೆ ಅಗತ್ಯವಿರುವ ನಗರ ಯೋಜನಾ ತಜ್ಞರ ಕೊರತೆ ನೀಗಿಸಲು ಸರ್ಕಾರದ ವತಿಯಿಂದಲೇ ಪ್ರತ್ಯೇಕ ನಗರ ಯೋಜನಾ ಕಾಲೇಜು ಆರಂಭಿಸಬೇಕು. ಕಲಬುರಗಿ, ಶಿವಮೊಗ್ಗ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲೂ ಕೈಗಾರಿಕೆ, ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಗರ ಯೋಜನೆಗೆ ಸಂಬಂಧಿಸಿದಂತೆ ತಜ್ಞ ಮಾನವ ಸಂಪನ್ಮೂಲ ಸಿದ್ಧಪಡಿಸಬೇಕು’ ಎನ್ನುವ ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ. 

ಈ ಕುರಿತು ಮಾಹಿತಿ ನೀಡಿದ ಶಿವಕುಮಾರ್‌, ‘ಈ ಬದಲಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಗರಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಹಾಗಾಗಿ, ಸಮಗ್ರ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗಿದೆ. ಯೋಜನೆಯ ಸಿದ್ಧತೆಯಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸಂಪೂರ್ಣ ಸಹಕಾರ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು. ಪಟ್ಟಣಗಳ ಬೆಳವಣಿಗೆಯಿಂದ ಗ್ರಾಮೀಣ ಬದುಕು ಸಮೃದ್ಧವಾಗಬೇಕು. ಇದೇ ಸರ್ಕಾರದ ಅಭಿವೃದ್ಧಿಯ ಚಿಂತನೆ’ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿನಗರಗಳಲ್ಲಿನ ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳು ಹೆಚ್ಚಿನ ಆದಾಯ ತರುತ್ತಿವೆ. ವಿವಿಧ ಮೂಲಗಳಿಂದ ಸಿಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಜನರ ಬದುಕಿನ ಸುಧಾರಣೆಗೂ ಬಳಸಬೇಕು

ನಗರ ಅಭಿವೃದ್ಧಿಗೆ 7 ವಲಯಗಳ ಆಧಾರ

ಉದ್ಯಮ: ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಸೇವಾ

ಉನ್ನತಿ: ಗುಣಮಟ್ಟದ ಸೇವೆಗಳು ಹಾಗೂ ಮೂಲಸೌಕರ್ಯ ವಿಸ್ತರಣೆ

ಸಂಚಾರ: ಸುಧಾರಿತ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ

ಪರಿಸರ: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿ

ಪ್ರತಿಭಾ: ಶಿಕ್ಷಣ, ಕೌಶಲ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ

ಸಮೃದ್ಧಿ: ಎಲ್ಲ ಪ್ರದೇಶಗಳ ಸಮಗ್ರ ಆರ್ಥಿಕ ಬೆಳವಣಿಗೆ

ಡಿಜಿಟಲ್: ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಸೇವೆಗಳ ವಿಸ್ತರಣೆ


50 ಸಾವಿರ ಮೆಗಾವಾಟ್‌ ವಿದ್ಯುತ್‌ ಬೇಡಿಕೆ

‘ಕರ್ನಾಟಕದ ವಿದ್ಯುತ್‌ ಬೇಡಿಕೆ ಈಗ ವಾರ್ಷಿಕ 12 ಸಾವಿರ ಮೆಗಾವಾಟ್‌ ಇದ್ದು, 2047ರ ವೇಳೆಗೆ 40 ಸಾವಿರದಿಂದ 50 ಸಾವಿರ ಮೆಗಾವಾಟ್‌ ತಲುಪುವ ಅಂದಾಜು ಇದೆ. ಪ್ರತಿ ವರ್ಷ ವಿದ್ಯುತ್‌ ಬೇಡಿಕೆ ಶೇ 10ರಿಂದ 12ರಷ್ಟು ಹೆಚ್ಚಳವಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.  ‘ಸೌರ ವಿದ್ಯುತ್‌ ಉತ್ಪಾದನೆ ಸೂರ್ಯನ ಬೆಳಕನ್ನು ಅವಲಂಬಿಸಿದೆ. ಆದರೆ, ವಿದ್ಯುತ್‌ಗೆ ರಾತ್ರಿ ವೇಳೆ ಬೇಡಿಕೆ ಹೆಚ್ಚು ಇರುತ್ತದೆ. ಹಗಲಿನಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್‌ ಸಂಗ್ರಹಿಸಿ ರಾತ್ರಿ ಬಳಸಲು ಬ್ಯಾಟರಿ ವ್ಯವಸ್ಥೆ ಅಳವಡಿಸಲು ಸರ್ಕಾರ ಟೆಂಡರ್ ಕರೆದಿದೆ’ ಎಂದು ಮಾಹಿತಿ ನೀಡಿದರು.

ಮೈಸೂರಿನ ನಗರ ಯೋಜನೆ: ಸಿ.ಎಂ ಮೆಚ್ಚುಗೆ

‘ಮೈಸೂರು ನಗರ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ಮೈಸೂರು ದೇಶದ ಉತ್ತಮ ಯೋಜಿತ ನಗರಗಳಲ್ಲಿ ಒಂದು. ಹಿಂದಿನ ಮಹಾರಾಜರ ಕಾಲದಿಂದಲೂ ನಗರಾಭಿವೃದ್ಧಿ ಅಧಿಕಾರಿಗಳವರೆಗೆ ವಿಶಾಲ ರಸ್ತೆಗಳು ಹಾಗೂ ವ್ಯವಸ್ಥಿತ ನಗರ ವಿನ್ಯಾಸಕ್ಕೆ ಆದ್ಯತೆ ನೀಡಿದ್ದಾರೆ. ಬೆಂಗಳೂರಿಗಿಂತಲೂ ಉತ್ತಮವಾಗಿ ಯೋಜನೆ ರೂಪಿಸಿದ್ದಾರೆ’ ಎಂದರು. ‘ಬೆಳಗಾವಿಯಲ್ಲೂ ಹಿಂದಿನ ಕಾಲದಲ್ಲಿ ಸೇನಾ ನೆಲೆಯ ಕಾರಣಕ್ಕೆ ಕೆಲವು ಪ್ರದೇಶಗಳು ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿವೆ. ಆದರೆ, ಉಳಿದ ನಗರಗಳಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನಗರ ಯೋಜನೆ ರೂಪಿಸುವ ಅಗತ್ಯವಿದೆ. ಎಲ್ಲ ನಗರಗಳ ಬೆಳವಣಿಗೆ, ಸಂಚಾರ ವ್ಯವಸ್ಥೆ, ಕೈಗಾರಿಕೆಗಳ ಸ್ಥಾಪನೆ ಮತ್ತು ಭವಿಷ್ಯದ ಅಗತ್ಯಗಳನ್ನು ಸಮಗ್ರವಾಗಿ ಪರಿಗಣಿಸಬೇಕಿದೆ’ ಎಂದು ಹೇಳಿದರು. 


ಕೈಗಾರಿಕೆಗಳಿಗೆ ಬೇಕು 2 ಲಕ್ಷ ಎಕರೆ

2 ಲಕ್ಷ ಎಕರೆ

2047ರ ವೇಳೆಗೆ ರಾಜ್ಯದಾದ್ಯಂತ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬೇಕಿರುವ ಅಂದಾಜು ಭೂಮಿ

30,000 ಎಕರೆ

ರಾಜ್ಯದ ವಿವಿಧೆಡೆ ಇರುವ 15 ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣ

9,600 ಎಕರೆ

ರಾಜ್ಯದ ವಿವಿಧೆಡೆ ಘೋಷಿಸಲಾಗುವ 27 ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿಗೆ ಮೀಸಲಿರಿಸುವ ಜಮೀನು

1.25 ಲಕ್ಷ ಎಕರೆ

2047ರ ಹೊತ್ತಿಗೆ ಕೈಗಾರಿಕೆಗಳ ಅಗತ್ಯ ಪೂರೈಸಲು ಇನ್ನಷ್ಟೇ ಭೂಸ್ವಾಧೀನ ಮಾಡಿಕೊಳ್ಳಬೇಕಿರುವ ಜಮೀನು

₹40 ಲಕ್ಷ ಕೋಟಿ

2047ರ ವೇಳೆಗೆ ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಯಾಗಲಿರುವ ಬಂಡವಾಳ