ಬೆಂಗಳೂರು: 'ಬೆಲೆ ಏರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆಯೋ ಅದನ್ನೇ ರಾಜ್ಯ ಸರ್ಕಾರವೂ ಪಾಲನೆ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರತಿಪಕ್ಷಗಳು ಬೆಲೆ ಏರಿಕೆ ಸರ್ಕಾರ ಎನ್ನುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹಾಲಿನ ಬೆಲೆ ₹12 ಹೆಚ್ಚಿಸುವ ಬೇಡಿಕೆ ಇತ್ತು. ಆದರೆ, ₹8 ಹೆಚ್ಚಿಸಿದ್ದೇವೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹಾಲಿನ ದರ ಹೆಚ್ಚಾಗಿದೆ. ಹಾಗಾಗಿ, ರಾಜ್ಯದಲ್ಲಿ ಉತ್ಪಾದನೆಯಾಗುವ ಹಾಲು ನೆರೆ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ವಿಧಾನಸಭೆ, ಪರಿಷತ್ನಲ್ಲೂ ಹಾಲಿನ ಬೆಲೆ ಏರಿಕೆ ವಿಷಯ ಚರ್ಚೆಯಾಗಿತ್ತು. ಏರಿಕೆಯಾಗಿರುವ ಮೊತ್ತದಲ್ಲಿ ₹1 ಒಕ್ಕೂಟಗಳ ನಿರ್ವಹಣೆಗಾಗಿ ನೀಡಲಾಗುತ್ತಿದ್ದು, ಉಳಿದ ₹7 ರೈತರಿಗೆ ನೀಡುತ್ತಿದ್ದೇವೆ' ಎಂದರು.
‘ಬೆಳೆ ಪರಿಹಾರದ ವಿಚಾರವಾಗಿ ರೈತರಿಗೆ ಸಹಾಯ ಮಾಡುತ್ತೇವೆ. ಕಬ್ಬಿನ ವಿಚಾರದಲ್ಲೂ ತೀರ್ಮಾನಕ್ಕೆ ಬಂದಿದ್ದೆವು. ಆದರೆ, ಕೇಂದ್ರ ಸರ್ಕಾರ ಆಶ್ವಾಸನೆ ಕೊಟ್ಟಿದೆ ಎಂದು ರೈತರು ಹೇಳಿದರು. ಕೇಂದ್ರ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಅದನ್ನು ಪಾಲಿಸುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದರು. ಮತ್ತೆ ಅಸಮಾಧಾನ ಆಗಿದೆ ಎನ್ನುವ ಮಾಹಿತಿ ಬಂದಿದೆ. ಎಲ್ಲರೂ ಕೇಂದ್ರದ ತೀರ್ಮಾನಕ್ಕೆ ಬದ್ಧರಾಗಬೇಕು’ ಎಂದರು.
ಕರ್ನಾಟಕ ರಾಜ್ಯೋತ್ಸವದ ಕಾರಣ ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ಎಸ್ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ನನಗೆ, ಸಂಪುಟ ಸಹೋದ್ಯೋಗಿಗಳಿಗೆ ಸಾಧ್ಯವಾಗುತ್ತಿಲ್ಲ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
261031-51-1216928258

