ಬೆಂಗಳೂರು: ಮುಂಗಾರು ಬೆಳೆಹಾನಿ ಮತ್ತು ಬರ ಪರಿಹಾರವಾಗಿ ಅರ್ಹರೈತರಿಗೆ ₹2,500 ತುರ್ತು ಪರಿಹಾರವನ್ನು ಬಿಡುಗಡೆ ಮಾಡಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ (ಎನ್‌ಡಿಆರ್‌ಎಫ್) ನಿಯಮಗಳನ್ವಯ 17 ಷರತ್ತುಗಳನ್ನು ವಿಧಿಸಿದೆ. ಈ ನಿಯಮದ ಪ್ರಕಾರ, ಶೇ 33ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಬೆಳೆಹಾನಿಯಾಗಿರುವ ರೈತರಿಗೆ ಮಾತ್ರವೇ ಪರಿಹಾರ ದೊರೆಯಲಿದೆ.
ರೈತರು ರಾಜ್ಯ ಸರ್ಕಾರದ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಕಡ್ಡಾಯವಾಗಿ ‘ರೈತ ಗುರುತಿನ ಸಂಖ್ಯೆ’ ಹೊಂದಿರಬೇಕು. ಪರಿಹಾರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಫ್ರೂಟ್ಸ್ ತಂತ್ರಾಂಶ ಮತ್ತು ಬೆಳೆಹಾನಿ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.
ಭೂ ಪರಿವರ್ತನೆ ಮಾಡಿಸಿಕೊಂಡಿದ್ದು, ಕೃಷಿ ಮುಂದುವರಿಸಿದ್ದಲ್ಲಿ ಅಂತಹ ಜಮೀನುಗಳಿಗೆ ಪರಿಹಾರ ಸಿಗುವುದಿಲ್ಲ. ನೀರಾವರಿ ಯೋಜನೆಗಳಿಗೆ ಭೂಸ್ವಾಧೀನವಾಗಿ ಪರಿಹಾರ ನೀಡಿದ್ದು, ಪಹಣಿಯಲ್ಲಿ ರೈತರ ಹೆಸರು ಇದ್ದರೆ ಅಂಥವರಿಗೂ ಪರಿಹಾರ ಸಿಗದು ಎಂದಿದೆ.
261031-51-295171990

