ಬೆಂಗಳೂರು: ರೈತರಿಗೆ ₹2,500 ಬರ ಪರಿಹಾರ ವಿತರಿಸಲು 17 ಕಠಿಣ ಷರತ್ತುಗಳನ್ನು ವಿಧಿಸಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಐದು ತಿಂಗಳಿನಿಂದ ರೈತರು ಸಂಕಷ್ಟದಲ್ಲಿದ್ದಾರೆ. ವಿಶೇಷ ಅಧಿವೇಶನ ಕರೆದು ಚರ್ಚಿಸಿದ ನಂತರ ಪ್ರತಿ ರೈತರ ಕುಟುಂಬಕ್ಕೆ ₹2,500 ಪರಿಹಾರ ನೀಡುವುದಾಗಿ ಘೋಷಿಸಲಾಗಿತ್ತು. ಘೋಷಣೆ ಮಾಡಿ ಒಂದು ತಿಂಗಳಾದರೂ ಹಣ ಜಮೆ ಮಾಡಿಲ್ಲ. ಈಗ ಪರಿಹಾರ ವಿತರಣೆಗೆ ಕಠಿಣ ಷರತ್ತು ಹಾಕುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ’ ಎಂದು ದೂರಿದರು.

‘ರೈತರ ಬ್ಯಾಂಕ್‌ ಖಾತೆ ವಿವರ, ಭೂ ದಾಖಲೆಗಳು ಹಾಗೂ ಇತರ ಮಾಹಿತಿಗಳು ಈಗಾಗಲೇ ಡಿಜಿಟಲ್‌ ವ್ಯವಸ್ಥೆಯಲ್ಲಿ ಇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಫ್ರೂಟ್ಸ್‌ ತಂತ್ರಾಂಶದಲ್ಲೂ ರೈತರ ವಿವರಗಳಿವೆ. ಹೀಗಿರುವಾಗ ಮತ್ತೆ 17 ಷರತ್ತುಗಳನ್ನು ವಿಧಿಸುವ ಅಗತ್ಯವೇನಿದೆ? ರೈತರ ದಾಖಲೆಗಳನ್ನು ಪರಿಶೀಲಿಸುವುದು ಸರ್ಕಾರದ ಜವಾಬ್ದಾರಿ, ರೈತರನ್ನು ಅಲೆದಾಡಿಸುವುದಲ್ಲ’ ಎಂದರು.

‘ಒಣಭೂಮಿ, ನೀರಾವರಿ ಭೂಮಿ, ಬಹುವಾರ್ಷಿಕ ಬೆಳೆ ಸೇರಿದಂತೆ ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಜಂಟಿ ಖಾತೆ, ಪೌತಿ ಖಾತೆ, ಭೂ ದಾಖಲೆಗಳ ವ್ಯತ್ಯಾಸ, ಬಗರ್‌ಹುಕುಂ ಸಾಗುವಳಿ ಜಮೀನು, ಕೃಷಿಯೇತರ ಜಮೀನು ಸೇರಿದಂತೆ ಹಲವು ಕಾರಣ ಮುಂದಿಟ್ಟುಕೊಂಡು ಪರಿಹಾರ ನಿರಾಕರಿಸುವ ವ್ಯವಸ್ಥೆ ರೂಪಿಸಲಾಗಿದೆ. ಎರಡು ಹೆಕ್ಟೇರ್‌ ಮಿತಿ ಹಾಕಲಾಗಿದೆ. ಇದು ರೈತ ಸಮುದಾಯವನ್ನು ವಿಭಜಿಸುವ ಹುನ್ನಾರ’ ಎಂದರು.

‘ಉತ್ತರ ಕರ್ನಾಟಕದ ಹಲವು ರೈತರು 10ರಿಂದ 15 ಎಕರೆ ಒಣಭೂಮಿ ಹೊಂದಿದ್ದರೂ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಅಂತಹ ರೈತರನ್ನು ಪರಿಹಾರದಿಂದ ಹೊರಗಿಡುವುದು ಯಾವ ನ್ಯಾಯ? ಬಯೊಮೆಟ್ರಿಕ್‌ ದೃಢೀಕರಣ ಸೇರಿದಂತೆ ಮತ್ತಷ್ಟು ಷರತ್ತುಗಳನ್ನು ವಿಧಿಸಿದರೆ ಪರಿಹಾರ ಪಡೆಯಲು ಸಾಧ್ಯವಿಲ್ಲ. ಸುಮಾರು ₹1,250 ಕೋಟಿ ಪರಿಹಾರವನ್ನು ಡಿಬಿಟಿ ಮೂಲಕ ವರ್ಗಾಯಿಸಲು ಸಾಧ್ಯವಿದ್ದರೂ ಕಂತುಗಳಲ್ಲಿ ಬಿಡುಗಡೆ ಮಾಡುವ ಮೂಲಕ ಸರ್ಕಾರ ತನ್ನ ಆರ್ಥಿಕ ಅಸಮರ್ಥತೆ ಪ್ರದರ್ಶಿಸುತ್ತಿದೆ’ ಎಂದು ದೂರಿದರು.

‘ಹಾಲಿನ ದರ ಏರಿಕೆಯ ಹೊರೆ’

ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಆದರೆ, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಹಾಲಿನ ಸಬ್ಸಿಡಿಯನ್ನು ₹5ರಿಂದ ₹7ಕ್ಕೆ ಹೆಚ್ಚಿಸುವುದಾಗಿ, ಹಸು ಮತ್ತು ಎಮ್ಮೆ ಖರೀದಿಗೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿದರದ ಸಾಲ ನೀಡುವುದಾಗಿ ಘೋಷಿಸಲಾಗಿತ್ತು. ಕೊಟ್ಟ ಭರವಸೆಯಂತೆ ನಡೆದುಕೊಳ್ಳದೆ ಈಗ ಗ್ರಾಹಕರ ಮೇಲೆ ಹೊರೆ ಹಾಕಿದೆ ಎಂದು ಅಶೋಕ ದೂರಿದರು.

ಕ್ಷೀರ ಕ್ರಾಂತಿ, ಕ್ಷೀರ ಕ್ರೆಡಿಟ್‌ ಕಾರ್ಡ್‌ ಯೋಜನೆ, ಪುಣ್ಯಕೋಟಿ ಯೋಜನೆ, ಎಲ್ಲ ಕಂದಾಯ ಭಾಗಗಳಲ್ಲಿ ಪಾಲಿಟೆಕ್ನಿಕ್‌ ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಪ್ರಶ್ನಿಸಿದರು.

ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು

ಆರ್‌. ಅಶೋಕ,

ವಿಧಾನಸಭೆ ವಿರೋಧ ಪಕ್ಷದ ನಾಯಕ

261031-51-1879661964