ಬೆಂಗಳೂರು: ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗೆ ಶುಕ್ರವಾರ ಕರೆಯಲಾಗಿದ್ದ ಸಭೆಯು ಆರೋಪ–ಪ್ರತ್ಯಾರೋಪ, ವಾಗ್ವಾದಗಳಿಗೆ ವೇದಿಕೆಯಾಯಿತು.

ಆರಂಭದಲ್ಲೇ ಮೀಸಲಾತಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಹಾಗೂ ಅವರ ಬೆಂಬಲಿಗರು, ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಂಜಾರರು ಇರುವ ಗುಂಪಿಗೆ ಶೇ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಈಗ ಅದನ್ನು ಶೇ 4ಕ್ಕೆ ಇಳಿಸಲಾಗಿದೆ. ಸಮುದಾಯದ ಯುವಕರು ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ರುದ್ರಪ್ಪ ಲಮಾಣಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಸೂಕ್ತ ಧ್ವನಿ ಎತ್ತಲಿಲ್ಲ’ ಎಂದು ಆರೋಪಿಸಿದರು.

ಬಂಜಾರ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ನೀಡಲಾಗಿದೆ. ಜನಸಂಖ್ಯೆ ಆಧಾರದಲ್ಲಿ ₹500 ಕೋಟಿ ನೀಡಬೇಕು. ಈ ವಿಚಾರದಲ್ಲೂ ತಾರತಮ್ಯ ಎಸಗಲಾಗಿದೆ ಎಂದು ದೂರಿದರು.

ಈ ವಿಚಾರ ರುದ್ರಪ್ಪ ಲಮಾಣಿ, ಪ್ರಭು ಚವ್ಹಾಣ್‌ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದೇ ವೇಳೆ ಕೆಲವರು ಸಂತ ಸೇವಾಲಾಲ್‌ ಜನ್ಮಸ್ಥಳ ಸೂರಗೊಂಡನಕೊಪ್ಪದ ಸಮಿತಿಯ ಸದಸ್ಯತ್ವವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡಲಾಗಿದೆ. ₹10 ಸಾವಿರ ಸದಸ್ಯತ್ವ ಶುಲ್ಕ ನಿಗದಿ ಮಾಡುವ ಮೂಲಕ ಬಡವರನ್ನು ಹೊರಗಿಡಲಾಗಿದೆ. ರುದ್ರಪ್ಪ ಲಮಾಣಿ 10 ವರ್ಷಗಳಿಂದ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಎಲ್ಲ ಅರ್ಹರಿಗೂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.

ಸೂರಗೊಂಡನಕೊಪ್ಪದಲ್ಲಿ ಪ್ರತ್ಯೇಕ ಧರ್ಮದರ್ಶಿ ಹುದ್ದೆ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮೀಸಲಾತಿ ವಿಚಾರದಲ್ಲಿ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

‘ಚರ್ಚೆಯ ವೇಳೆ ಸಚಿವರು ಅವಹೇಳನಕಾರಿ ಪದ ಗಳನ್ನು ಬಳಸಿದ್ದಾರೆ ಎಂದು ಆರೋಪಿಸ ಲಾಯಿತು. ಇಂತಹ ಮಾತುಗಳು ಸಚಿವ ಸ್ಥಾನದ ಘನತೆಗೆ ತಕ್ಕುದಲ್ಲ’ ಎಂದು ಸಮುದಾಯದ ಮುಖಂಡ ಎ.ಆರ್. ಗೋವಿಂದಸ್ವಾಮಿ ಅವರು ಲಮಾಣಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಶಾಸಕ ಚಂದ್ರಾನಾಯ್ಕ, ವಿಧಾನಪರಿಷತ್‌ ಮಾಜಿ ಸದಸ್ಯೆ ಜಲಜಾನಾಯ್ಕ, ಸಮುದಾಯದ ಮುಖಂಡರಾದ ಲಿಂಬ್ಯಾನಾಯ್ಕ, ಕವಿತಾ ಚಂದ್ರಶೇಖರ್‌, ರೇಷ್ಮಾ, ವಿಠ್ಠಲ್ ಜಾದವ್, ಡಿ. ರಾಮಾನಾಯ್ಕ, ಅನಂತನಾಯ್ಕ, ಮಹೇಶ್‌ ನಾಯ್ಕ ಉಪಸ್ಥಿತರಿದ್ದರು.

ಸಮುದಾಯದ ಪ್ರಮುಖ ಬೇಡಿಕೆಗಳು

ಬಂಜಾರ ಸಮುದಾಯದ ಎಲ್ಲ ಗ್ರಾಮಗಳ ಪ್ರಮುಖರಿಗೆ ಸದಸ್ಯತ್ವ ಕಲ್ಪಿಸಬೇಕು

ಸಾಮಾನ್ಯರಿಗೆ ಹೊರೆಯಾದ ಸದಸ್ಯತ್ವ ಶುಲ್ಕ ₹10 ಸಾವಿರವನ್ನು ಕಡಿಮೆ ಮಾಡಬೇಕು

ಸಮುದಾಯದ ಹೆಸರಿನಲ್ಲಿ ಅಧಿಕಾರ ಮತ್ತು ಸ್ಥಾನಮಾನಗಳಿಗೆ ಆದ್ಯತೆ ನೀಡಬಾರದು

ಬಂಜಾರ ಸಮುದಾಯದ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿ

ಜಿಲ್ಲಾವಾರು ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳು, ಶಾಲಾ-ಕಾಲೇಜುಗಳಿಗೆ ಸೌಕರ್ಯ

ಸದಸ್ಯತ್ವ, ನಿರ್ದೇಶಕರ ನೇಮಕ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು

261031-44-1052137037