ಬೆಂಗಳೂರು: ‘ಸಭಾಪತಿ ಸ್ಥಾನವು ಅಧಿಕಾರವಲ್ಲ. ಅದು ಜವಾಬ್ದಾರಿ. ಎಲ್ಲಿಯವರೆಗೆ ಈ ಹೊಣೆಗಾರಿಕೆ ನನ್ನಲ್ಲಿ ಇರುತ್ತದೆಯೋ ಅಲ್ಲಿವರೆಗೆ ಪ್ರಾಮಾಣಿಕವಾಗಿ ಸದನ ನಡೆಸುತ್ತೇನೆ’ ಎಂದು ವಿಧಾನ ಪರಿಷತ್‌ ಸಭಾಪತಿ ಸಲೀಂ ಅಹ್ಮದ್ ಹೇಳಿದರು.

ಕನ್ನಡ ಶ್ರೀಸಾಮಾನ್ಯರ ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಹೋರಾಟ ಮಾಡಿಕೊಂಡು, ಪಕ್ಷ ಸಂಘಟಿಸಿಕೊಂಡು ಇದ್ದ ನನಗೆ ಬಯಸದೇ ಬಂದ ಭಾಗ್ಯ ಇದು. ಆಡಳಿತ ಪಕ್ಷದ ಅಥವಾ ವಿರೋಧ ಪಕ್ಷದ ಯಾರೇ ಇರಲಿ. ಅವರಿಗೆ ನ್ಯಾಯ ನೀಡುವ ಕೆಲಸ ಮಾಡುತ್ತೇನೆ. ಸರ್ಕಾರವನ್ನು ತಿದ್ದುವ ವಿರೋಧ ಪಕ್ಷಗಳಿಗೆ ಹೆಚ್ಚು ಅವಕಾಶ ನೀಡಬೇಕಾಗುತ್ತದೆ. ಅದೇ ರೀತಿ ಸರ್ಕಾರ ದ ಒಳ್ಳೆಯ ಕೆಲಸಗಳಿಗೆ ವಿರೋಧ ಪಕ್ಷ ಸಹಕಾರ ಕೊಡಬೇಕಾಗುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಸಲೀಂ ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುವ, ಪ್ರತಿಬಿಂಬಿಸುವ ಈ ಕಾರ್ಯಕ್ರಮ ಭಾರತದ ಭಾವೈಕ್ಯದ ಸಂಕೇತದಂತಿದೆ’ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಾಮೀಯಾ ಮಸೀದಿಯ ಧರ್ಮಗುರು ಮೌಲಾನ ಮುಫ್ತಿ ಮಕ್‌ಸೂದ್‌ ಇಮ್ರಾನ್‌ ರಷಾದಿ, ಸವಣೂರು ದೊಡ್ಡ ಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ, ಕಾರ್ಯದರ್ಶಿ ಗಳಾದ ಸಮೀವುಲ್ಲಾ ಖಾನ್‌, ಎಸ್‌. ಪಿನಾಕಪಾಣಿ ಉಪಸ್ಥಿತರಿದ್ದರು.

261031-4-534559554