ಬೆಂಗಳೂರು: ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ರಾಜ್ಯದಾದ್ಯಂತ ಬಾಟಲಿಗಳಲ್ಲಿ ದೊರೆಯುವ ಕುಡಿಯುವ ನೀರಿನ ಘಟಕಗಳ ಮೇಲೆ ವಿಶೇಷ ತಪಾಸಣೆ ನಡೆಸಿದ್ದು, ನಿಯಮಗಳ ಉಲ್ಲಂಘನೆ ಕಾರಣ 12 ಘಟಕಗಳಿಗೆ ಬೀಗ ಹಾಕಿಸಿದ್ದಾರೆ.

ಗುರುವಾರ 45 ಘಟಕಗಳು ಹಾಗೂ ಶುಕ್ರವಾರ 57 ಘಟಕಗಳಲ್ಲಿ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಈ ತಪಾಸಣೆಗೆ 23 ತಂಡಗಳನ್ನು ಇಲಾಖೆ ರಚಿಸಿತ್ತು. ಈ ತಂಡವು ವಿವಿಧ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ, ನೀರು ಹಾಗೂ ಬಾಟಲಿಗಳನ್ನು ಪರಿಶೀಲಿಸಿತು. ಈ ವೇಳೆ ಕೆಲವೆಡೆ ಲೇಬಲ್ ಹೊಂದಾಣಿಕೆಯಾಗದಿರುವುದು, ಹಲವೆಡೆ ಸ್ವಚ್ಛತೆ ಇಲ್ಲದಿರುವುದನ್ನು ಅಧಿಕಾರಿಗಳು ಗುರುತಿಸಿದರು. ಕೆಲ ಘಟಕಗಳು ಕೀಟ ನಿಯಂತ್ರಣ ಪ್ರಮಾಣಪತ್ರ ಹೊಂದಿರದಿರುವುದು ತಪಾಸಣೆಯಿಂದ ದೃಢಪಟ್ಟಿದೆ.

ಸ್ವಚ್ಛತೆ ಕೊರತೆ, ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿಲ್ಲದಿರುವುದು ಸೇರಿ ವಿವಿಧ ಕಾರಣಕ್ಕೆ 53 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ನೀರಿನ 69 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೈಸೂರು ಮತ್ತು ದಾವಣಗೆರೆಯ ತಲಾ 3 ಘಟಕಗಳಲ್ಲಿ ತಪ್ಪು ಲೇಬಲ್ ಇರುವ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟಕಗಳಿಗೆ ಬೀಗ: ಕೋಲಾರ ಜಿಲ್ಲೆಯ ಮುಳಬಾಗಿಲಿನ ಘಟಕವೊಂದರಲ್ಲಿ ಸ್ವಚ್ಛತೆ ಇಲ್ಲದ ಕಾರಣ ಬೀಗ ಹಾಕಿಸಲಾಗಿದೆ. ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಇಲ್ಲದೆ ಕಾರ್ಯಾಚರಣೆ ಮಾಡುತ್ತಿದ್ದ ಕಾರಣ, ಹಾಸನ ಜಿಲ್ಲೆಯ ಸಂತೇಪೇಟೆಯ ಎಸ್.ಪಿ. ಫುಡ್ ಆ್ಯಂಡ್ ಬ್ರಿವರೇಜಸ್, ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ಅವಂತಿ ಇಂಡಸ್ಟ್ರೀಸ್ ಮತ್ತು ಓಂ ಶಕ್ತಿ ಮಿನರಲ್ಸ್, ಬೀದರ್ ಜಿಲ್ಲೆಯ ಸಾಯಿರಾಮ್ ಫುಡ್ ಬ್ರಿವರೇಜಸ್, ಕಲಬುರಗಿಯ ನಂದಿ ಫುಡ್ ಆ್ಯಂಡ್ ಬ್ರಿವರೇಜಸ್ ಮತ್ತು ಅಕ್ವಾ ರಿಫ್ರೆಶ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಹಾಗೂ ಮೈಸೂರು ಗ್ರಾಮಾಂತರದ ಡಾಲಿಯಾ ಬ್ರಿವರೇಜಸ್ ಘಟಕಗಳನ್ನು ಮುಚ್ಚಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಎಂ.ಎಸ್. ಫುಡ್ ಆ್ಯಂಡ್ ಬ್ರಿವರೇಜಸ್ ಘಟಕದಲ್ಲಿ ಲೇಬಲ್ ದೋಷಗಳು ಕಂಡುಬಂದ ಕಾರಣ, ₹7,380 ಮೌಲ್ಯದ ಒಂದು ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ 82 ‘ಕೇಸ್‌’ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

‘ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ. ಬಾಟಲ್‌ಗಳ ನೀರು ಖರೀದಿಸುವಾಗ ಹಾಗೂ ಕುಡಿಯುವಾಗ ಅವುಗಳ ಮೇಲೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಸಂಖ್ಯೆ, ಐಎಸ್‌ಐ ಗುರುತು, ತಯಾರಿಕಾ ದಿನಾಂಕ ಮತ್ತು ಮುದ್ರೆ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಸಂದೇಹ ಇದ್ದಲ್ಲಿ ಆಹಾರ ಸುರಕ್ಷತೆ ಇಲಾಖೆಗೆ ತಿಳಿಸಬೇಕು’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಜನರ ಆರೋಗ್ಯದ ಜತೆಗೆ ಆಟವಾಡುವವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ

ಯು.ಟಿ. ಖಾದರ್, ಆರೋಗ್ಯ ಸಚಿವ

261031-15-319054722