ನವದೆಹಲಿ: 2027ರ ಜನಗಣತಿಯ ಭಾಗವಾಗಿ ಜನಸಂಖ್ಯೆಯ ಎಣಿಕೆಯು ದೇಶದ ಬಹುತೇಕ ಭಾಗಗಳಲ್ಲಿ ಮುಂದಿನ ವರ್ಷದ ಜನವರಿ 25 ಮತ್ತು ಫೆಬ್ರವರಿ 28ರ ನಡುವೆ ನಡೆಯಲಿದೆ.

ಜನವರಿ 10ರಿಂದ ಸ್ವಯಂ-ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದ ಹಿಮ ಬೀಳುವ ಪ್ರದೇಶಗಳಲ್ಲಿ ಜನಸಂಖ್ಯೆಯ ಎಣಿಕೆಯು ಸೆಪ್ಟೆಂಬರ್ 1ರಂದು ಆರಂಭವಾಗಿ ಸೆಪ್ಟೆಂಬರ್ 30ರಂದು ಮುಕ್ತಾಯಗೊಂಡಿತ್ತು. ವಿಧಾನಸಭಾ ಚುನಾವಣೆಗಳು ನಡೆಯಲಿರುವ ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ಹಿಮಾವೃತವಲ್ಲದ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯು ಡಿಸೆಂಬರ್ 1ರಿಂದ ಜನವರಿ 4ರವರೆಗೆ ನಡೆಯಲಿದೆ ಎಂದು ಗೃಹ ಸಚಿವಾಲಯವು ಈ ಹಿಂದೆ ತಿಳಿಸಿತ್ತು.

ಜನಗಣತಿ 2027ರ ಎರಡನೇ ಹಂತವಾದ ಜನಸಂಖ್ಯಾ ಗಣತಿಯು ದೇಶದ ಉಳಿದ ಭಾಗಗಳಲ್ಲಿ ಜನವರಿ 25ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ. ಇದರ ಜೊತೆಗೆ, ಮಾರ್ಚ್ 1ರಿಂದ ಮಾರ್ಚ್ 5ರವರೆಗೆ ಪರಿಷ್ಕರಣಾ ಸುತ್ತು ನಡೆಯಲಿದೆ. ಸ್ವಯಂ-ಗಣತಿ ಹಂತವು ಜನವರಿ 10ರಿಂದ 24ರವರೆಗೆ ಇರುತ್ತದೆ.

ಜನಸಂಖ್ಯಾ ಗಣತಿ ಹಂತದಲ್ಲಿ ಕೇಳಬೇಕಾದ 40 ಪ್ರಶ್ನೆಗಳನ್ನು ಸರ್ಕಾರವು ಈ ಮೊದಲೇ ಪ್ರಕಟಿಸಿದೆ. ಇದರಲ್ಲಿ ಜಾತಿಯನ್ನು ದಾಖಲಿಸುವ ಪ್ರಶ್ನೆಯೂ ಸೇರಿದೆ. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿ ಗಣತಿಗೂ ಅವಕಾಶ ಕಲ್ಪಿಸಲಾಗಿದೆ. 

2011ರ ಜನಗಣತಿಯಲ್ಲಿ 29 ಪ್ರಶ್ನೆಗಳಿದ್ದವು. ಆದರೆ, ಈಗಿನ ಪಟ್ಟಿಯಲ್ಲಿ ಕೋವಿಡ್-19 ಲಸಿಕೆ ಪಡೆದ ಸ್ಥಳ, ಬ್ಯಾಂಕ್ ಖಾತೆಗಳ ಸಂಖ್ಯೆ, ಡಿಜಿಟಲ್ ಸಾಕ್ಷರತೆಯ ಸ್ಥಿತಿ, ಘೋಷಿತ ರಾಷ್ಟ್ರೀಯತೆ, ಸಂಗಾತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ಲಭ್ಯವಿದ್ದರೆ ಪಾಸ್‌ಪೋರ್ಟ್ ಸಂಖ್ಯೆಯಂತಹ ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ.