ಹಾಸನ: ಇಲ್ಲಿನ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಸಂಬಂಧಿಸಿದೆ ಎನ್ನಲಾದ ಖಾಸಗಿ ವಾಹಿನಿಯ ಸ್ಟಿಂಗ್ ಕಾರ್ಯಾಚರಣೆಯ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಮಾತುಕತೆ ಹಾಗೂ ಹಣ ಪಡೆಯುವ ದೃಶ್ಯಗಳು ವಿಡಿಯೊದಲ್ಲಿವೆ. ಗುತ್ತಿಗೆದಾರರ ಜೊತೆಗೆ ಮಾತುಕತೆ ವೇಳೆ ಸ್ವರೂಪ್ ಪ್ರಕಾಶ್ ಶೇ 8ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಗುತ್ತಿಗೆದಾರರು ಶೇ 5ರಷ್ಟು ನೀಡುವುದಾಗಿ ಹೇಳಿದ್ದು, ಅದಕ್ಕೆ ಶಾಸಕ ಒಪ್ಪಿಕೊಂಡಿರುವುದು ವಿಡಿಯೊದಲ್ಲಿದೆ. ಜೊತೆಗೆ ಕೈಯಲ್ಲಿ ಹಣ ಪಡೆದಿರುವುದೂ ಸ್ಟಿಂಗ್ ಆಪರೇಷನ್‌ನಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಸಂಪರ್ಕಿಸಿದರೂ ಲಭ್ಯರಾಗಲಿಲ್ಲ.
ನೋಟಿಸ್: ಕಮಿಷನ್ ಆರೋಪದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠರು ಸ್ವರೂಪ್ ಪ್ರಕಾಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಅವರ ಉತ್ತರ ಬಂದ ಬಳಿಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ತಿಳಿಸಿದ್ದಾರೆ.
ರಾಜೀನಾಮೆಗೆ ಆಗ್ರಹ: ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಸಂಬಂಧಿಸಿದೆ ಎನ್ನಲಾದ ಕಮಿಷನ್ ಆರೋಪದ ವಿಡಿಯೊ ಹರಿದಾಡುತ್ತಿದ್ದು ಇದು ಅಸಹ್ಯ ಮೂಡಿಸುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಾಸನ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ಆಗ್ರಹಿಸಿದ್ದಾರೆ.

