ಕೋಲಾರ, ಅಕ್ಟೋಬರ್ 31: ಮಳೆಯ ಕೊರತೆಯಿಂದಾಗಿ ಕರ್ನಾಟಕದ ಅನ್ನದಾತರು ತೀವ್ರ ಕಂಗಾಲಾಗಿದ್ದು, ಜೀವನ ನಿರ್ವಹಣೆಗಾಗಿ ಬೇರೆ ಬೇರೆ ದಾರಿಗಳನ್ನು ಅನಿವಾರ್ಯವಾಗಿ ಹುಡುಕುತ್ತಿದ್ದಾರೆ. ಕೋಲಾರ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ರೈತರು ಕೃಷಿ ಬಿಟ್ಟು ಕೂಲಿಗೆ ತೆರಳಲು ಆರಂಭಿಸಿರೋದು ಭರದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಕೆಲವರು ಜಾನುವಾರು ಸಾಕಾಣಿಕೆಯ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಳೆಯ ಪರಿಸ್ಥಿತಿ ಸುಧಾರಿಸಿದರೆ ಮತ್ತೆ ತಮ್ಮ ಜಮೀನಿನಲ್ಲಿ ಕೃಷಿ ಆರಂಭಿಸಬೇಕೆಂಬ ತೀರ್ಮಾನದಲ್ಲಿ ಅವರಿದ್ದಾರೆ.
ಸಂಕಷ್ಟದಲ್ಲಿ ಕೃಷಿಕರ ಬದುಕು
ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದ ಜಿಲ್ಲೆಯ ಕೆಲ ರೈತರ ಬದುಕನ್ನು ಮಳೆಯ ಕೊರತೆ ಸಂಕಷ್ಟಕ್ಕೆ ದೂಡಿದೆ. ಇದರ ಜೊತೆಗೆ ಕೃಷಿ ಕಾರ್ಮಿಕರ ಸಮಸ್ಯೆಯೂ ತಲೆದೋರಿರೋದು ಮತ್ತೊಂದು ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹಿಂದೆಲ್ಲ ದಿನಕ್ಕೆ 150ರಿಂದ 175 ರೂ. ನೀಡಿದರೆ ಕಾರ್ಮಿಕರು ಸಿಗುತ್ತಿದ್ದರು. ಆದರೆ, ಈಗ 500 ರೂ. ಕೂಲಿ ನೀಡಿದರೂ ಕೆಲಸಗಾರರು ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಂಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಈಗ ತಾವೇ ದಿನಗೂಲಿ ಕೆಲಸಕ್ಕೆ ಹೋಗಿ ಜೀವನ ನಿರ್ವಹಣೆ ಮಾಡುವ ಸ್ಥಿತಿ ಇದೆ ಎಂದು ಹಲವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ, ಅನುಮಾನಾಸ್ಪದ ಸಾವುಗಳಿಂದ ಬೆಚ್ಚಿಬಿದ್ದಿದ್ದ ಕೋಲಾರ ಜನತೆಗೆ ರಿಲೀಫ್: ಅಕ್ರಮ ಕಲ್ಲುಗಣಿಗಾರಿಕೆಗೆ ತಕ್ಷಣದಿಂದಲೇ ಬ್ರೇಕ್
ಟೊಮೆಟೊ ಫಸಲಿನ ಮೇಲೂ ಮಳೆ ಅಭಾವದ ಎಫೆಕ್ಟ್
ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರು ಟೊಮೆಟೊ ಫಸಲಿನ ಮೇಲೂ ಮಳೆಯ ಅಭಾವದ ಕರಿನೆರಳು ಬಿದ್ದಿದೆ. ಮಳೆಯ ಕೊರತೆಯಿಂದಾಗಿ ಬೆಳೆ ವ್ಯಾಪಕವಾಗಿ ಹಾನಿಗೊಳಗಾಗಿದ್ದು, ಬೋರ್ವೆಲ್ಗಳನ್ನು ಹೊಂದಿರುವ ರೈತರಿಗೂ ಉತ್ತಮ ಟೊಮೆಟೊ ಇಳುವರಿ ಪಡೆಯಲು ಸಾಕಷ್ಟು ಮಳೆಯ ಅಗತ್ಯವಿದೆ ಎಂಬುದು ಇಲ್ಲಿನ ರೈತರ ಅನಿಸಿಕೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡದೆ, ಕಡಿಮೆ ಕಾರ್ಮಿಕರ ಅಗತ್ಯವಿರುವ ಮತ್ತು ತುಲನಾತ್ಮಕವಾಗಿ ಸುರಕ್ಷಿತ ಬೆಳೆ ಎಂದು ಪರಿಗಣಿಸಲಾಗುವ ಸೌತೆಕಾಯಿ ಬೆಳೆಯತ್ತ ಕೆಲ ರೈತರು ಮುಖ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

