ಬೆಂಗಳೂರು, ಅಕ್ಟೋಬರ್ 31: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತೂತುಕುಡಿ ಮತ್ತು ಕಣ್ಣೂರು ಮಾರ್ಗಗಳಿಗೆ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸುವುದಾಗಿ ಘೋಷಿಸಿದೆ. ಹಬ್ಬದ ಸಾಲು ರಜೆಗಳಲ್ಲಿ ತಮ್ಮೂರುಗಳಿಗೆ ತೆರಳುವ ಸಾರ್ವಜನಿಕರಿಗೆ ಈ ವಿಶೇಷ ರೈಲು ಸೇವೆಗಳು ಅತ್ಯಂತ ಸಹಕಾರಿಯಾಗಲಿವೆ.

ಬೆಂಗಳೂರು – ತೂತುಕುಡಿ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 06533 ನವೆಂಬರ್ 6 ರ ರಾತ್ರಿ 9.45 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು, ಮರುದಿನ ಅಂದರೆ ನವೆಂಬರ್ 7 ರ ಮಧ್ಯಾಹ್ನ 12.30 ಕ್ಕೆ ತೂತುಕುಡಿ ತಲುಪಲಿದೆ.
  • ರೈಲು ಸಂಖ್ಯೆ 06534 ನವೆಂಬರ್ 7 ರ ಮಧ್ಯಾಹ್ನ 3.30 ಕ್ಕೆ ತೂತುಕುಡಿ​ನಿಂದ ಹೊರಟು, ನವೆಂಬರ್ 8 ರ ಬೆಳಿಗ್ಗೆ 5.30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಬೆಂಗಳೂರು – ಕಣ್ಣೂರು ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 06545 ನವೆಂಬರ್ 7 ರಂದು ರಾತ್ರಿ 12.05 ಕ್ಕೆ (ಮಧ್ಯರಾತ್ರಿ) ಎಸ್‌ಎಂವಿಟಿ ಬೆಂಗಳೂರು (SMVT Bengaluru) ನಿಲ್ದಾಣದಿಂದ ಹೊರಟು ಅಂದೇ ಮಧ್ಯಾಹ್ನ 2 ಗಂಟೆಗೆ ಕಣ್ಣೂರು ತಲುಪಲಿದೆ.
  • ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06546 ನವೆಂಬರ್ 7 ರಂದು ಸಂಜೆ 6.25 ಕ್ಕೆ ಕಣ್ಣೂರಿನಿಂದ ಹೊರಟು, ನವೆಂಬರ್ 8 ರ ಬೆಳಿಗ್ಗೆ 9.45 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಹಬ್ಬದ ಸಮಯದಲ್ಲಿ ಉಂಟಾಗುವ ಸೀಟುಗಳ ಕೊರತೆ ನಿವಾರಣೆ

ಹಬ್ಬದ ಸಮಯದಲ್ಲಿ ಉಂಟಾಗುವ ಸೀಟುಗಳ ಕೊರತೆ ಮತ್ತು ಜನ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಕೈಗೊಂಡಿರುವ ಈ ಕ್ರಮದಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಮುಂಗಡ ಕಾಯ್ದಿರಾತಿ ವಿವರಗಳಿಗಾಗಿ ಅಧಿಕೃತ ರೈಲ್ವೆ ವೆಬ್‌ಸೈಟ್ ಅಥವಾ ಆಪ್‌ಗಳನ್ನು ಗಮನಿಸುವಂತೆ ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ