ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಗ್ರೂಪ್-ಎ ಪಂದ್ಯಗಳಲ್ಲಿ ಆಸ್ಟ್ರೇಳಿಯಾ ದಾಂಡಿಗರು ಅಕ್ಷರಶಃ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ. ಮೌಂಗ್ ಕಾಕ್‌ನ ಮಿಷನ್ ರೋಡ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜ್ಯಾಕ್ ವುಡ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕ ದಾಂಡಿಗ ಮ್ಯಾಕ್ಸ್ ಬ್ರ್ಯಾಂಟ್ ಕೇವಲ 10 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಬಳಿಕ ಬಂದ ನಿಕ್ ಹಾಬ್ಸನ್ ಕೂಡ ಹತ್ತೇ ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು.

ನಿಕ್, ಮ್ಯಾಕ್ಸ್ ಸಿಡಿಲಬ್ಬರ:

ಮೊದಲ ಓವರ್​ನಿಂದಲೇ ಅಬ್ಬರಿಸಿದ ಮ್ಯಾಕ್ಸ್ ಬ್ರ್ಯಾಂಟ್ 11 ಎಸೆತಗಳಲ್ಲಿ 2 ಫೋರ್ ಹಾಗೂ 8 ಭರ್ಜರಿ ಸಿಕ್ಸರ್​​ಗಳೊಂದಿಗೆ 56 ರನ್ ಬಾರಿಸಿದರು. ಮತ್ತೊಂದೆಡೆ ಜ್ಯಾಕ್ ವುಡ್ 11 ಎಸೆತಗಳಲ್ಲಿ 40 ರನ್​ಗಳ ಕೊಡುಗೆ ನೀಡಿದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕ್ ಹಾಬ್ಸನ್ 11 ಎಸೆತಗಳಲ್ಲಿ 3 ಫೋರ್ ಹಾಗೂ 6 ಸಿಕ್ಸರ್​ಗಳೊಂದಿಗೆ 50 ರನ್ ಚಚ್ಚಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಗದಿತ 6 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್​ ಕಲೆಹಾಕಿತು.

160 ರನ್​ಗಳ ಕಠಿಣ ಗುರಿ:

160 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜಾನ್ ಸಿಂಪ್ಸನ್ ಕೇವಲ 12 ಎಸೆತಗಳಲ್ಲಿ 54 ರನ್ ಚಚ್ಚಿದರೆ, ಅವರಿಗೆ ಸಾಥ್ ನೀಡಿದ ಮಾರ್ಟಿನ್ ಅ್ಯಂಡರ್ಸನ್ 24 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ಇಬ್ಬರೂ ಬ್ಯಾಟರ್‌ಗಳು ಅಜೇಯರಾಗುಳಿದು ಹೋರಾಡಿದರೂ, ರನ್ ರೇಟ್‌ನ ಭಾರದಿಂದಾಗಿ ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪರಿಣಾಮ, ಇಂಗ್ಲೆಂಡ್ ತಂಡವು 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್ ಗಳಿಸಲಷ್ಟೇ ಶಕ್ತವಾಗಿ, 38 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ವಿಶ್ವ ದಾಖಲೆ:

ಆಸ್ಟ್ರೇಲಿಯಾ ಗಳಿಸಿದ 159 ರನ್‌ಗಳ ಮೊತ್ತವು ಈ ಟೂರ್ನಿಯ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ಜಂಟಿ ಟೀಮ್ ಸ್ಕೋರ್.
ಇದಕ್ಕೂ ಮುನ್ನ ಒಮಾನ್ ತಂಡವು 2024 ರಲ್ಲಿ ಇಂಗ್ಲೆಂಡ್ ವಿರುದ್ಧವೇ ವಿಕೆಟ್ ನಷ್ಟವಿಲ್ಲದೆ 159 ರನ್ ಬಾರಿಸಿ ಈ ದಾಖಲೆ ಬರೆದಿತ್ತು. ಇದೀಗ ಆಸ್ಟ್ರೇಲಿಯಾ ತಂಡವು 159/4 ರನ್ ಗಳಿಸುವ ಮೂಲಕ ಒಮಾನ್ ತಂಡದ ಆ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.

ಇಂಗ್ಲೆಂಡ್ ತಂಡ: ಮಾರ್ಟಿನ್ ಅ್ಯಂಡರ್ಸನ್ , ಲ್ಯೂಕ್ ಹಾಲ್ಮನ್ , ಜ್ಯಾಕ್ ಕಾರ್ಸನ್ , ಫಿನ್ ಹಡ್ಸನ್-ಪ್ರೆಂಟಿಸ್ , ನಾಥನ್ ಗಿಲ್‌ಕ್ರಿಸ್ಟ್ , ಜಾನ್ ಸಿಂಪ್ಸನ್ (ನಾಯಕ), ಡಾನ್ ಮೌಸ್ಲಿ , ಎಡ್ ಬರ್ನಾರ್ಡ್.

ಇದನ್ನೂ ಓದಿ: ಟೀಮ್ ಇಂಡಿಯಾ ಅಬ್ಬರ, ವಿಂಡೀಸ್ ಪಡೆಗೆ ಸ್ಯಾಮಿ ಬಹುಪರಾಕ್!

ಆಸ್ಟ್ರೇಲಿಯಾ ತಂಡ:  ಮ್ಯಾಕ್ಸ್ ಬ್ರ್ಯಾಂಟ್ , ಜ್ಯಾಕ್ ವುಡ್ (ನಾಯಕ) , ಅಲೆಕ್ಸ್ ರಾಸ್ , ನಿಕ್ ಹಾಬ್ಸನ್ , ಕ್ರಿಸ್ ಗ್ರೀನ್ , ಮ್ಯಾಥ್ಯೂ ಕೆಲ್ಲಿ, ಕೇನ್ ರಿಚರ್ಡ್ಸನ್.