ಚಿಕ್ಕಮಗಳೂರು, ನವೆಂಬರ್​​ 27: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಆತಂಕ ಮುಂದುವರಿದಿದ್ದು, ಮೂಡಿಗೆರೆ-ಬೇಲೂರು ಗಡಿ ಭಾಗದಲ್ಲಿ 39 ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ನಿನ್ನೆ 4 ಗುಂಪುಗಳಾಗಿ ವಿಭಜನೆಯಾಗಿದ್ದ ಕಾಡಾನೆಗಳು ಮತ್ತೆ ಒಂದೆಡೆ ಸೇರಿದ್ದು, ಮಾಕೋನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚಾರ ನಡೆಸುತ್ತಿವೆ. ಗಜಪಡೆ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದ್ದು, ಈ ಬಗ್ಗೆ ಕಲ್ಲೋಳ, ನಾಗಲಾಪುರ ಹಾಗೂ ಬಾರದಹಳ್ಳಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಮಾಕೋನಹಳ್ಳಿ, ಹೊರಟ್ಟಿ, ಚಂದ್ರಪುರ, ಘಟ್ಟದಹಳ್ಳಿ ಭಾಗದಲ್ಲೂ ಆತಂಕದ ವಾತಾವರಣವಿದೆ. ಹೀಗಾಗಿ ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸದಂತೆ ಅರಣ್ಯಾಧಿಕಾರಿಗಳು ಆಗ್ರಹಿಸಿದ್ದಾರೆ. ವಾಹನ ಸವಾರರು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ನಾಳೆ ಬೃಹತ್​​ ಪ್ರತಿಭಟನೆಗೆ ಕರೆ

ಕಾಡಾನೆಗಳ ದಾಂಧಲೆಗೆ ಮಾಕೋನಹಳ್ಳಿ ಬಳಿ ಕಾಫಿ ತೋಟ ಸಂಪೂರ್ಣ ಸರ್ವನಾಶವಾಗಿದೆ. ಹೀಗಾಗಿ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದು, ಕಾಡಾನೆಗಳ ಓಡಿಸುವಂತೆ ಆಗ್ರಹಿಸಿ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಾಳೆ ಬೃಹತ್​​ ಪ್ರತಿಭಟನೆಗೂ ಕರೆ ನೀಡಲಾಗಿದೆ.

ಇದನ್ನೂ ಓದಿ: ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ: ತೋಟದಲ್ಲೇ ಕುಳಿತು ರೈತ ಕಣ್ಣೀರು

ಗಜಪಡೆ ಸೆರೆಗೆ ಕಾರ್ಯಾಚರಣೆ ಆರಂಭ

ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನ ಮತ್ತಾವರದಲ್ಲಿ 6 ಕುಮ್ಕಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದೆ. ಚಿಕ್ಕಮಗಳೂರು ಹೊರವಲಯದಲ್ಲಿ ಸಂಚರಿಸುತ್ತಿರುವ ಸಲಗ ಸೆರೆಗೆ ಸರ್ಕಾರದಿಂದಆದೇಶದ ಬೆನ್ನಲ್ಲೇ ದುಬಾರೆ ಮತ್ತು ಸಕ್ಕರೆಬೈಲಿನಿಂದ ಕರೆಸಿಕೊಂಡಿದ್ದ ಕುಮ್ಕಿ ಆನೆಗಳು ನಿನ್ನೆಯೇ ಬಿಕ್ಕೋಡು ಆನೆ ಕ್ಯಾಂಪ್ ತಲುಪಿದ್ದವು. ದುಬಾರೆ ಶಿಬಿರದಿಂದ ಸುಗ್ರೀವ, ಅಯ್ಯಪ್ಪ ಮತ್ತು ಮಾಣಿಕ್ಯ ಆನೆಗಳು ಬಂದಿದ್ದರೆ ಸಕ್ಕರೆಬೈಲಿನಿಂದ ಸಾಗರ್, ಭೀಷ್ಮ, ಜು.ಅರ್ಜುನ ಕುಮ್ಕಿ ಆನೆಗಳು ಬಂದಿವೆ. ಈ ಪೈಕಿ ಸುಗ್ರೀವ ಹಾಗೂ ಸಾಗರ್ ನೇತೃತ್ವದಲ್ಲಿ ಕಾಡಾನೆಗಳ ಸೆರೆ ಕಾರ್ಯಚರಣೆ ನಡೆಯಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.