ನನ್ನ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನಾನು ಇದೇ ಮಾದರಿಯನ್ನು ನೋಡಿದ್ದೇನೆ. ಬಂಡವಾಳವು ಆರಂಭದಲ್ಲೇ ಬರುತ್ತದೆ, ಅಗತ್ಯಕ್ಕಿಂತ ಹೆಚ್ಚು ನಿರ್ಮಾಣ ಮಾಡುತ್ತದೆ, ಆತಂಕಕ್ಕೆ ಒಳಗಾಗುತ್ತದೆ, ಮೌಲ್ಯವನ್ನು ಮರುನಿರ್ಧರಿಸುತ್ತದೆ ಮತ್ತು ಮತ್ತೆ ಕಟ್ಟುತ್ತದೆ; ಆದರೆ ಅದರ ಕೆಳಗೆ ತಂತ್ರಜ್ಞಾನದ ಬಳಕೆ ಮಾತ್ರ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತದೆ.
ಇತ್ತೀಚೆಗಷ್ಟೇ ಇದೇ ಅಂಕಣದಲ್ಲಿ, ಮಾರುಕಟ್ಟೆಗಳು ಕೇವಲ ಮೌಲ್ಯಮಾಪನದ ಸೂಚಕಗಳೇ ಹೊರತು ತಂತ್ರಜ್ಞಾನದ ಭವಿಷ್ಯವಾಣಿ ಹೇಳುವ ಸಾಧನಗಳಲ್ಲ ಎಂದು ನಾನು ವಾದಿಸಿದ್ದೆ. ಆ ನಂತರದ ವಾರಗಳಲ್ಲಿ ನಡೆದ ಬೆಳವಣಿಗೆಗಳು ಇದನ್ನು ಮತ್ತಷ್ಟು ದೃಢಪಡಿಸಿವೆ.
ಟೆಕ್ ಜಗತ್ತಿನಲ್ಲಿ ನವೆಂಬರ್ 5ರಿಂದ ನಡೆದ 4 ದೊಡ್ಡ ಬದಲಾವಣೆಗಳು
ನವೆಂಬರ್ 5ರಿಂದೀಚೆಗೆ ಟೆಕ್ ಜಗತ್ತಿನಲ್ಲಿ ನಾಲ್ಕು ದೊಡ್ಡ ಬದಲಾವಣೆಗಳು ನಡೆದಿವೆ: ನಾಸ್ಡಾಕ್ (Nasdaq) ಶೇ. 5.5ರಷ್ಟು ಕುಸಿದು 2.5 ರಿಂದ 3 ಟ್ರಿಲಿಯನ್ ಡಾಲರ್ ಸಂಪತ್ತು ಕರಗಿಹೋಯಿತು, ನಿಕ್ಕಿ (Nikkei) ಮತ್ತು ಕೋಸ್ಪಿ (Kospi) ಸೂಚ್ಯಂಕಗಳು ಸುಮಾರು ಶೇ. 6ರಷ್ಟು ಕುಸಿದವು; ಜೆನ್ಸನ್ ಹುವಾಂಗ್ ರಾಜೀನಾಮೆ ನೀಡಿದರು ಮತ್ತು ಎನ್ವಿಡಿಯಾ (Nvidia) ಸತತ ಏಳನೇ ವಾರದ ನಷ್ಟ ಅನುಭವಿಸಿ ಅಕ್ಟೋಬರ್ನ ಗರಿಷ್ಠ ಮಟ್ಟಕ್ಕಿಂತ ಸುಮಾರು 1.6 ರಿಂದ 1.7 ಟ್ರಿಲಿಯನ್ ಡಾಲರ್ ಕೆಳಗಿಳಿಯಿತು; ಆಂಥ್ರೋಪಿಕ್ (Anthropic) ಕಂಪನಿಯು ಪ್ರತಿ ಷೇರಿಗೆ 83 ಡಾಲರ್ ದರದಲ್ಲಿ ಸುಮಾರು 1.5 ಟ್ರಿಲಿಯನ್ ಡಾಲರ್ ಮೌಲ್ಯದೊಂದಿಗೆ ‘ANT’ ಹೆಸರಿನಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿತು; ಬಳಿಕ ಹುವಾಂಗ್ ಅವರನ್ನು ಮರುನೇಮಕ ಮಾಡಲಾಯಿತು ಹಾಗೂ ಎನ್ವಿಡಿಯಾ ಶೇ. 30ರಷ್ಟು ಮತ್ತು ನಾಸ್ಡಾಕ್ ಸರಿಸುಮಾರು ಶೇ. 7ರಷ್ಟು ಏರಿಕೆ ಕಂಡವು. ಈ ನಾಲ್ಕರಲ್ಲಿ ಮೂರು ಪ್ರಕರಣಗಳಲ್ಲಿ ತಂತ್ರಜ್ಞಾನದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ, ಷೇರು ಬೆಲೆಗಳು ಮಾತ್ರ ಟ್ರಿಲಿಯನ್ಗಟ್ಟಲೆ ಡಾಲರ್ಗಳಷ್ಟು ಏರಿಳಿತ ಕಂಡವು. ಆದರೆ ನಾಲ್ಕನೇ ಪ್ರಕರಣವಾದ ಆಂಥ್ರೋಪಿಕ್ನ ಲಿಸ್ಟಿಂಗ್ನಲ್ಲಿ ವಾಸ್ತವವಾಗಿಯೇ ದೊಡ್ಡ ಹಾಗೂ ತೀವ್ರವಾದ ಸಕಾರಾತ್ಮಕ ಬದಲಾವಣೆ ಕಂಡುಬಂದಿತು. ಈ ಎಲ್ಲದರ ನಡುವಿನ ಸಾಮಾನ್ಯ ಕೊಂಡಿಯೆಂದರೆ ‘ಪ್ರತಿಭೆ ಮತ್ತು ತಂತ್ರಜ್ಞಾನ ನಿರ್ಮಾತೃಗಳು’—ಇವರ ಮೌಲ್ಯವನ್ನು ಮಾರುಕಟ್ಟೆಗಳು ಏರಿಳಿತದ ಎರಡೂ ದಿಕ್ಕುಗಳಲ್ಲೂ ಸರಿಯಾಗಿ ಅಂದಾಜಿಸುವಲ್ಲಿ ಎಡವುತ್ತವೆ.
ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಪುನರಾಗಮನ ಮತ್ತು ಪ್ರತಿಭೆಯ ಬೆಲೆ
ನವೆಂಬರ್ 23ರಂದು, ಹುವಾಂಗ್ ರಾಜೀನಾಮೆ ನೀಡಿದ 11 ದಿನಗಳ ಬಳಿಕ ಎನ್ವಿಡಿಯಾ ಆಡಳಿತ ಮಂಡಳಿಯು ಸರ್ವಾನುಮತದಿಂದ ಅವರನ್ನು ಅಧ್ಯಕ್ಷ, ಸಿಇಒ ಮತ್ತು ನಿರ್ದೇಶಕರಾಗಿ ಮರುನೇಮಕ ಮಾಡಿತು. ವಿದೇಶಿ ಗುಪ್ತಚರ ಕಾರ್ಯಾಚರಣೆಯ ಕುರಿತು ತನಿಖೆ ಇನ್ನೂ ಮುಂದುವರಿದಿದೆ. ನಮ್ಮ ಕಾಲದ ಅತ್ಯಂತ ಕಾರ್ಯತಂತ್ರದ (Strategic) ಉದ್ಯಮವೆಂದರೆ ಅದು ಎಐ. ಎನ್ವಿಡಿಯಾ ಅದರ ಕೇಂದ್ರಬಿಂದುವಿನಲ್ಲಿದೆ. ಹುವಾಂಗ್ ಆ ಪ್ರತಿಭಾ ಸಮೂಹದ ಅತ್ಯಮೂಲ್ಯ ಭಾಗವಾಗಿದ್ದಾರೆ. ಈ ಉದ್ಯಮದಲ್ಲಿರುವ ಅತ್ಯಂತ ಮೌಲ್ಯಯುತ ವ್ಯಕ್ತಿಗಳೇ ಗುರಿಯಾಗುತ್ತಾರೆ; ಕಂಪನಿಗಳ ಆಡಳಿತ ಮಂಡಳಿಗಳು ತಮ್ಮ ವ್ಯವಹಾರ ತಂತ್ರಗಾರಿಕೆಯಷ್ಟೇ ಗಂಭೀರವಾಗಿ ಅವರ ಭದ್ರತೆ ಮತ್ತು ಉಳಿಸಿಕೊಳ್ಳುವಿಕೆಯನ್ನೂ (Retention) ಪರಿಗಣಿಸಬೇಕು.
ಈಗ ಮಾರುಕಟ್ಟೆ ಹೇಗೆ ವರ್ತಿಸಿತು ಎಂಬುದನ್ನು ನೋಡಿ. ಅಕ್ಟೋಬರ್ 6ರ ದಾಖಲೆಯ ಮಟ್ಟದಿಂದ ಎನ್ವಿಡಿಯಾ ಏಳು ವಾರಗಳ ಕಾಲ ಕುಸಿತ ಕಂಡು ತನ್ನ ಮೌಲ್ಯದ ಅರ್ಧದಷ್ಟನ್ನು ಕಳೆದುಕೊಂಡಿತ್ತು. ಬಳಿಕ ಒಂದೇ ದಿನದ ವಹಿವಾಟಿನಲ್ಲಿ ಸುಮಾರು ಶೇ. 30ರಷ್ಟು ಜಿಗಿಯಿತು; ಅದರೊಂದಿಗೆ ನಾಸ್ಡಾಕ್ ಕೂಡ ಶೇ. 7ರಷ್ಟು ಏರಿತು. ಶುಕ್ರವಾರ ಮತ್ತು ಸೋಮವಾರದ ನಡುವೆ ಒಂದೇ ಒಂದು ಟ್ರಾನ್ಸಿಸ್ಟರ್ ಕೂಡ ಬದಲಾಗಲಿಲ್ಲ. ಆದರೆ ಬದಲಾಗಿದ್ದು, ಅವುಗಳನ್ನು ನಿರ್ಮಿಸುವ ಜನರು ಕಂಪನಿಯಲ್ಲೇ ಉಳಿಯುತ್ತಾರೆ ಎಂಬ ವಿಶ್ವಾಸ. ಹುವಾಂಗ್ ಕಂಪನಿಯಿಂದ ದೂರವಿದ್ದಾಗ, “ಎನ್ವಿಡಿಯಾದಲ್ಲಿರುವ ಬದಲಿ ಮಾಡಲಾಗದ ಪ್ರತಿಭೆಗಳು ಈಗ ಕಂಪನಿ ತೊರೆಯುವ ಬಗ್ಗೆ ಯೋಚಿಸುತ್ತಿವೆ” ಎಂದು ಎನ್ವಿಡಿಯಾದ ಡೆವಲಪರ್ ಟೆಕ್ನಾಲಜಿ ನಿರ್ದೇಶಕರು ಎಚ್ಚರಿಸಿದ್ದರು; ವೇತನ ಪರಿಶೀಲನೆಗಳನ್ನು ಅವಧಿಗೂ ಮುನ್ನವೇ ಕೈಗೊಳ್ಳಲಾಯಿತು ಮತ್ತು ಇತರ ಕಂಪನಿಗಳ ನೇಮಕಾತಿದಾರರಿಂದ ಕರೆಗಳು ಬರಲಾರಂಭಿಸಿದ್ದವು. ಮಾರುಕಟ್ಟೆಯು ಪ್ರತಿಭಾ ನಷ್ಟದ ಅಪಾಯವನ್ನು ಒರಟಾಗಿ ಅಳೆಯುತ್ತಿತ್ತು: ಈ ಉದ್ಯಮದಲ್ಲಿ ಸಿಲಿಕಾನ್ನಷ್ಟೇ ಅತ್ಯಂತ ವಿರಳವಾದ ಸಂಪನ್ಮೂಲವೆಂದರೆ ಅದು ಪ್ರತಿಭೆ.
1.5 ಟ್ರಿಲಿಯನ್ ಡಾಲರ್ ಆಂಥ್ರೋಪಿಕ್ ಮೌಲ್ಯ ಮತ್ತು ಉದಯ್ ಕೋಟಕ್ ಪ್ರಶ್ನೆ
ನವೆಂಬರ್ 19ರಂದು, ಆಂಥ್ರೋಪಿಕ್ ಕಂಪನಿಯು ನಾಸ್ಡಾಕ್ನಲ್ಲಿ ‘ANT’ (ಇರುವೆ) ಹೆಸರಿನಲ್ಲಿ ಪಟ್ಟಿಯಾಯಿತು. ಆದರೆ ಅದರಲ್ಲಿ ‘ಇರುವೆ’ಯಂತೆ ಸಣ್ಣದಾದದ್ದು ಏನೂ ಇರಲಿಲ್ಲ. ಆರಂಭಿಕ 70 ರಿಂದ 78 ಡಾಲರ್ ಶ್ರೇಣಿಗಿಂತ ಹೆಚ್ಚಾಗಿ ಪ್ರತಿ ಷೇರಿಗೆ 83 ಡಾಲರ್ ಬೆಲೆ ನಿಗದಿಯಾಗಿ, ಸುಮಾರು 1.5 ಟ್ರಿಲಿಯನ್ ಡಾಲರ್ ಮೌಲ್ಯಮಾಪನವನ್ನು ಪಡೆಯಿತು. ಇದು 111.50 ಡಾಲರ್ ದರದಲ್ಲಿ ವಹಿವಾಟು ಆರಂಭಿಸಿ, ನಂತರ ಕೊಂಚ ಕೆಳಗಿಳಿದು ಸ್ಥಿರಗೊಂಡಿತು.
ಐದು ವರ್ಷಗಳ ಹಿಂದೆ ಅಸ್ತಿತ್ವದಲ್ಲೇ ಇಲ್ಲದಿದ್ದ ಆಂಥ್ರೋಪಿಕ್ ಇಂದು ಭಾರತದ ಅಗ್ರ 10 ಕಂಪನಿಗಳ ಒಟ್ಟು ಮೌಲ್ಯಕ್ಕಿಂತಲೂ ದೊಡ್ಡ ಮೌಲ್ಯವನ್ನು ಹೊಂದಿದೆ ಎಂದು ಉದಯ್ ಕೋಟಕ್ ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಶ್ನೆಗಳು ಗಂಭೀರ ಉತ್ತರಕ್ಕೆ ಅರ್ಹವಾಗಿವೆ: “ನಮ್ಮ ಮೌಲ್ಯವನ್ನು ಕಡಿಮೆ ಅಂದಾಜಿಸಲಾಗಿದೆಯೇ, ಅಥವಾ ಹೊಸ ಜಗತ್ತಿನ ವೇಗಕ್ಕೆ ನಾವು ಹೊಂದಿಕೊಳ್ಳಬೇಕಿದೆಯೇ? ಅಥವಾ ಎರಡೂ ನಿಜವೇ?” ನನ್ನ ಉತ್ತರ—ಎರಡೂ ನಿಜ. 2025ರ ಇಡೀ ವರ್ಷದಲ್ಲಿ 4.6 ಬಿಲಿಯನ್ ಡಾಲರ್ ಆದಾಯ ಗಳಿಸಿದ್ದ ಆಂಥ್ರೋಪಿಕ್, 2026ರ ಮೊದಲಾರ್ಧದಲ್ಲೇ 16.3 ಬಿಲಿಯನ್ ಡಾಲರ್ ಆದಾಯವನ್ನು ವರದಿ ಮಾಡಿದೆ. ಇದು ತಂತ್ರಜ್ಞಾನ ಅಳವಡಿಕೆಯ ಅತಿವೇಗದ ಪಥವಾಗಿದ್ದು, ಈ ಅಳವಡಿಕೆ ಏಕಮುಖವಾಗಿ ಮುಂದೆ ಸಾಗುವಂಥದ್ದಾಗಿದೆ.
2024ರ ಅಂತ್ಯದಲ್ಲಿ ಸುಮಾರು 940 ಮಂದಿಯಿದ್ದ ಆಂಥ್ರೋಪಿಕ್ ಇಂದು ಸುಮಾರು 5,300 ಜನರಿಂದ ಕಟ್ಟಲ್ಪಟ್ಟಿದೆ: ನನ್ನ ಲೆಕ್ಕಾಚಾರದ ಪ್ರಕಾರ, ಪ್ರತಿಯೊಬ್ಬ ಉದ್ಯೋಗಿಗೆ ಸುಮಾರು 280 ಮಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ. ಆದರೆ ಇದು ಎಷ್ಟು ಸೂಕ್ಷ್ಮ ಮತ್ತು ದುರ್ಬಲವಾಗಿದೆ ಎಂಬುದನ್ನು ಕಂಪನಿಯು ತನ್ನ ದಾಖಲೆಯಲ್ಲಿ ನೇರವಾಗಿ ಒಪ್ಪಿಕೊಂಡಿದೆ. ಪ್ರತಿಸ್ಪರ್ಧಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು “ನೇರವಾಗಿ ಸೆಳೆಯುವ ಪ್ರಯತ್ನವನ್ನು ಮುಂದುವರಿಸಿವೆ” ಮತ್ತು ತಮ್ಮದೇ ಈಕ್ವಿಟಿ ಕೊಡುಗೆಗಳು “ಹಿಂದಿನಂತೆ ಪರಿಣಾಮಕಾರಿಯಾಗಿಲ್ಲದಿರಬಹುದು” ಎಂದು ಅದು ಹೇಳಿಕೊಂಡಿದೆ.
ಇಂಟರ್ನೆಟ್ ಬಬಲ್ನಿಂದ ಎಐ ತಿದ್ದುಪಡಿಯವರೆಗೆ: ಭಾರತಕ್ಕೇನು ಪಾಠ?
ನನ್ನ ವೃತ್ತಿಜೀವನದ ಪ್ರತಿಯೊಂದು ಚಕ್ರದಲ್ಲೂ ನಾನು ಇದೇ ಪ್ರವೃತ್ತಿಯನ್ನು ಕಂಡಿದ್ದೇನೆ. ಬಂಡವಾಳ ಆರಂಭದಲ್ಲೇ ಬರುತ್ತದೆ, ಅತಿಯಾಗಿ ನಿರ್ಮಿಸುತ್ತದೆ, ಭಯಭೀತವಾಗುತ್ತದೆ, ಮರುಮೌಲ್ಯಮಾಪನ ಮಾಡುತ್ತದೆ ಮತ್ತು ಪುನರ್ನಿರ್ಮಿಸುತ್ತದೆ; ಆದರೆ ಅಡಿಪಾಯದಲ್ಲಿ ಬಳಕೆ ಮಾತ್ರ ಗುಣಾಕಾರವಾಗುತ್ತಾ ಸಾಗುತ್ತದೆ. 2000ನೇ ಇಸವಿಯಲ್ಲಿ ಇಂಟರ್ನೆಟ್ ಬಬಲ್ ಸ್ಫೋಟಗೊಂಡಾಗ ನಾಸ್ಡಾಕ್ ಶೇ. 78ರಷ್ಟು ಕುಸಿತ ಕಂಡಿತ್ತು, ಆದರೆ ಇಂದು ನಮ್ಮ ಸುತ್ತಲಿನ ಪ್ರತಿಯೊಂದು ವ್ಯವಸ್ಥೆಯ ಮೂಲಾಧಾರವೇ ಇಂಟರ್ನೆಟ್ ಆಗಿದೆ. ನವೆಂಬರ್ನ ಕುಸಿತ, ಎನ್ವಿಡಿಯಾದ ಪತನ ಮತ್ತು ಸೋಮವಾರದ ಚೇತರಿಕೆ—ಇವೆಲ್ಲವೂ ಅದೇ ಚಿತ್ರದ ವೇಗದ ಅವತರಣಿಕೆಗಳಷ್ಟೇ. ಎಐ ಇಂತಹ ಮಾರುಕಟ್ಟೆ ತಿದ್ದುಪಡಿಗಳನ್ನು (Corrections) ಮೆಟ್ಟಿ ನಿಲ್ಲಲಿದೆ. ಆದರೆ ಆ ಯುಗ ಪೂರ್ಣವಾಗಿ ಬಂದಾಗ ಅದರ ಮಾಲೀಕತ್ವ ಯಾರ ಕೈಯಲ್ಲಿರುತ್ತದೆ ಎಂಬುದೇ ನಿಜವಾದ ಪ್ರಶ್ನೆ. ಮಾರುಕಟ್ಟೆ ಕುಸಿತದ ಸಮಯದಲ್ಲಿ ಪ್ರತಿಭೆ, ಸಾಮರ್ಥ್ಯ ಮತ್ತು ಆಸ್ತಿಗಳು ಅಗ್ಗವಾಗುತ್ತವೆ.
ಮೂರು ವಾರಗಳ ಹಿಂದೆ, ಆನ್ಲೈನ್ ಬ್ರೋಕರೇಜ್ ಕಂಪನಿಯೊಂದರ ಸಿಇಒ, ಭಾರತದಲ್ಲಿ ಹಣ ಕಳೆದುಕೊಳ್ಳಲು ಯಾವುದೇ ಎಐ ಕಂಪನಿಗಳಿಲ್ಲ ಎಂಬುದರಲ್ಲಿಯೇ ಸಮಾಧಾನ ಪಟ್ಟುಕೊಂಡಿದ್ದರು. ಈ ತಂತ್ರಜ್ಞಾನ ಪಥದ ಯಾವುದೇ ಮಾಲೀಕತ್ವ ಹೊಂದಿರದ ದೇಶವು ಮಾರುಕಟ್ಟೆ ಕುಸಿತದ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಆದರೆ ಅದು ಹೂಡಿಕೆಗಳು, ಉದ್ಯೋಗಗಳು ಹಾಗೂ ಉದ್ಯಮಗಳು ಮತ್ತು ಆರ್ಥಿಕತೆಯಲ್ಲಿ ಸೃಷ್ಟಿಯಾಗುವ ಅಭೂತಪೂರ್ವ ಒಟ್ಟು ಮೌಲ್ಯವರ್ಧನೆಯ (Gross Value Added) ಲಾಭವನ್ನೂ ಪಡೆಯಲು ಸಾಧ್ಯವಿಲ್ಲ—ಅಷ್ಟೇ ಅಲ್ಲ, ತಮ್ಮದೇ ದೇಶದ ಉದ್ಯಮಗಳು, ಗ್ರಾಹಕರು ಮತ್ತು ವಿದ್ಯಾರ್ಥಿಗಳು ಈ ತಂತ್ರಜ್ಞಾನದ ಸುತ್ತ ಅವಕಾಶಗಳನ್ನು ಕಟ್ಟಿಕೊಳ್ಳುವ ನಿಯಮಗಳನ್ನು ತಾವೇ ನಿರ್ಧರಿಸಲೂ ಸಾಧ್ಯವಾಗುವುದಿಲ್ಲ.
ಭಾರತದ ಎಐ ಪ್ರತಿಭೆ, ಎಚ್-1ಬಿ ಶುಲ್ಕ ಮತ್ತು ಸಾರ್ವಭೌಮ ಚಿಪ್ಗಳ ಅಗತ್ಯ
ಎಐ ಇಂದಿನ ರಣರಂಗವಾಗಿದೆ. ಹಿಂದೆಂದಿಗಿಂತಲೂ ಈಗ ಪ್ರತಿಭೆಗೆ ಹೆಚ್ಚಿನ ಮಹತ್ವವಿದೆ. ಎಲ್ಲಿ ಪ್ರತಿಭೆ ಇದೆಯೋ ಅಲ್ಲಿಗೆ ಹೂಡಿಕೆಗಳು ಹರಿದುಬರುತ್ತವೆ. ಎಲ್ಲಿ ಅವಕಾಶಗಳಿವೆಯೋ ಅಲ್ಲಿಗೆ ಪ್ರತಿಭೆಗಳು ತೆರಳುತ್ತವೆ. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಜಗತ್ತಿನ ಚಿಪ್ ವಿನ್ಯಾಸಕಾರರಲ್ಲಿ ದೊಡ್ಡ ಪಾಲು ಇಲ್ಲೇ ಇದೆ; ಅವರು ವಿನ್ಯಾಸಗೊಳಿಸಿದ ಸಿಲಿಕಾನ್ನ ಬೌದ್ಧಿಕ ಆಸ್ತಿ (IP) ಬೇರೆ ದೇಶಗಳ ಬ್ಯಾಲೆನ್ಸ್ ಶೀಟ್ಗಳಲ್ಲಿ ಸೇರುತ್ತಿದೆ. ಸ್ಟ್ಯಾನ್ಫೋರ್ಡ್ನ 2026ರ ಎಐ ಸೂಚ್ಯಂಕವು ಎಐ ಲೇಖಕರು ಮತ್ತು ಆವಿಷ್ಕಾರಕರ ಸಂಖ್ಯೆಯಲ್ಲಿ ಭಾರತವನ್ನು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರಿಸಿದೆ—ಅಮೆರಿಕದ 2,20,000ಕ್ಕೆ ಎದುರಾಗಿ ಭಾರತದಲ್ಲಿ ಸುಮಾರು 50,000 ಮಂದಿ ಇದ್ದಾರೆ, ಮತ್ತು ಎಐ ಕೌಶಲ್ಯ ವ್ಯಾಪಕತೆಯಲ್ಲಿ (AI skill penetration) ಭಾರತ ಮೊದಲ ಸ್ಥಾನದಲ್ಲಿದೆ. ಆದರೆ ಅಧ್ಯಯನಕ್ಕೊಳಪಟ್ಟ ಯಾವುದೇ ದೇಶಕ್ಕಿಂತಲೂ ಅತಿಹೆಚ್ಚು ಎಐ ಪ್ರತಿಭೆಗಳ ನಿವ್ವಳ ಹೊರಹರಿವು (Net outflow) ಭಾರತದಲ್ಲೇ ದಾಖಲಾಗಿದೆ. ನಾವು ಎಂಜಿನಿಯರ್ಗಳಿಗೆ ತರಬೇತಿ ನೀಡುತ್ತೇವೆ, ಆದರೆ ಅವರು ನಿರ್ಮಿಸಿದ್ದರ ಮಾಲೀಕತ್ವವನ್ನು ಬೇರೆಯವರು ಪಡೆಯುತ್ತಾರೆ.
ಸ್ವತಃ ವಾಷಿಂಗ್ಟನ್ನ ಬಾಗಿಲು ಕೂಡ ಅಸ್ಥಿರವಾಗಿದೆ: ಜೂನ್ನಲ್ಲಿ ಅದರ 1,00,000 ಡಾಲರ್ ಎಚ್-1ಬಿ (H-1B) ಶುಲ್ಕವನ್ನು ರದ್ದುಗೊಳಿಸಲಾಗಿದ್ದು, ಅದು ಇನ್ನೂ ಮೇಲ್ಮನವಿಯ ಹಂತದಲ್ಲಿದೆ. ಎಲ್ಲಿ ಅವಕಾಶಗಳು, ಕಠಿಣ ಸವಾಲುಗಳು, ಕಂಪ್ಯೂಟ್ ಸಾಮರ್ಥ್ಯ ಮತ್ತು ಮಾಲೀಕತ್ವ ಇರುತ್ತದೆಯೋ ಅಲ್ಲಿಗೆ ಪ್ರತಿಭೆಗಳು ಸಾಗುತ್ತವೆ. ಆದ್ದರಿಂದಲೇ ನಮ್ಮ ಬಂಡವಾಳವು ಚಿಪ್ ವಿನ್ಯಾಸಕ್ಕೆ ಹಣ ಹೂಡಬೇಕು, ನಮಗೆ ಸಾರ್ವಭೌಮ ಇನ್ಫರೆನ್ಸ್ ಚಿಪ್ಗಳು (Sovereign inference chips) ಮತ್ತು ದೇಶೀಯ ಖರೀದಿ ವ್ಯವಸ್ಥೆ ಅಗತ್ಯವಿದೆ, ಹಾಗೂ ನಮ್ಮದೇ ಭಾಷೆಗಳಲ್ಲಿ ಕಂಪ್ಯೂಟ್ ಮತ್ತು ಎಐ ಮಾದರಿಗಳು ಬೇಕಾಗಿವೆ.
ಭಾರತದ 10 ಅತಿದೊಡ್ಡ ಕಂಪನಿಗಳಿಗಿಂತಲೂ ಹೆಚ್ಚು ಮೌಲ್ಯ ಹೊಂದಿರುವ ಐದು ವರ್ಷದ ಕಂಪನಿಯೊಂದು ನಮ್ಮನ್ನು ಬೆದರಿಸಬೇಕಿಲ್ಲ. ಬದಲಾಗಿ ಅದು ನಮಗೆ ಪಾಠ ಕಲಿಸಬೇಕು. ಸಂಸ್ಥಾಪಕರು ಹೊರಹೋಗುತ್ತಾರೆ ಮತ್ತು ಮರಳಿ ಬರುತ್ತಾರೆ. ಆಡಳಿತ ಮಂಡಳಿಗಳು ತನಿಖೆ ನಡೆಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ತಳಮಟ್ಟದ ವಾಸ್ತವವನ್ನು ಬದಲಿಸುವುದಿಲ್ಲ: ಕಂಪ್ಯೂಟ್ ವೆಚ್ಚ ಅಗ್ಗವಾಗುತ್ತಲೇ ಇದೆ, ಮಾದರಿಗಳು ಉತ್ತಮಗೊಳ್ಳುತ್ತಲೇ ಇವೆ, ತಂತ್ರಜ್ಞಾನದ ಅಳವಡಿಕೆ ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ, ಮತ್ತು ತಮ್ಮ ಪ್ರತಿಭೆಯನ್ನು ಉಳಿಸಿಕೊಳ್ಳುವ ದೇಶಗಳು ಹಾಗೂ ಉದ್ಯಮಗಳು ತಮ್ಮ ಮುನ್ನಡೆಯನ್ನು ದುಪ್ಪಟ್ಟುಗೊಳಿಸುತ್ತವೆ. ಮಾರುಕಟ್ಟೆ ಬೆಲೆಗಳು ಇಂದು ಯಾವುದರ ಮೌಲ್ಯ ಎಷ್ಟು ಎಂದು ಕೇಳುತ್ತವೆ. ಆದರೆ ತಂತ್ರಜ್ಞಾನದ ಪಥವು ನಾಳೆ ಏನು ಸಾಧ್ಯವಾಗಲಿದೆ ಎಂದು ಕೇಳುತ್ತದೆ. ಕಳೆದ 50 ವರ್ಷಗಳಿಂದ ಈ ಎರಡು ಪ್ರಶ್ನೆಗಳಲ್ಲಿ ಒಂದೇ ಪ್ರಶ್ನೆಗೆ ಮಾತ್ರ ನಿರಂತರವಾಗಿ ಒಂದೇ ಉತ್ತರ ಸಿಕ್ಕಿದೆ. ಈ ತಂತ್ರಜ್ಞಾನದ ಪಯಣ ನಿರಂತರವಾದುದು. ಅದರ ಮಾಲೀಕತ್ವ ಯಾರದ್ದು ಎಂಬುದನ್ನು ಪ್ರತಿಭೆ ನಿರ್ಧರಿಸುತ್ತದೆ. ಉಳಿದೆಲ್ಲವೂ ಬರೀ ಗದ್ದಲವಷ್ಟೇ.
ಲೇಖಕರುರಾಜೀವ್ ಚಂದ್ರಶೇಖರ್ಶಾಸಕರು, ಕೇರಳ ಬಿಜೆಪಿ ರಾಜ್ಯಾಧ್ಯಕ್ಷರುಮಾಜಿ ಸಂಸದರು ಹಾಗೂ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಮಾಜಿ ರಾಜ್ಯ ಸಚಿವರು

