ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಇದೀಗ ತಮ್ಮ ಬೌಲಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕೂಚ್ ಬೆಹಾರ್ ಟ್ರೋಫಿ ಎಲೈಟ್ ಟೂರ್ನಿಯಲ್ಲಿ ದೆಹಲಿ ಅಂಡರ್-19 ತಂಡದ ಪರ ಆಡುತ್ತಿರುವ ವೇದಾಂತ್, ಪಂಜಾಬ್ ಅಂಡರ್-19 ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದಾರೆ. ಒಂದೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮತ್ತೊಂದು ವಿಶೇಷವೂ ಇದೆ. ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ದೆಹಲಿ ಅಂಡರ್-19 ತಂಡದ ಪರ ಆಡುತ್ತಿದ್ದು, ತಂಡದ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಒಂದೇ ಪಂದ್ಯದಲ್ಲಿ ಸೆಹ್ವಾಗ್ ಕುಟುಂಬದ ಇಬ್ಬರು ಪುತ್ರರು ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದಿದ್ದಾರೆ.
ವೇದಾಂತ್ ಬೌಲಿಂಗ್‌ಗೆ ಪಂಜಾಬ್ ತತ್ತರ
ನಾಲ್ಕು ದಿನಗಳ ಈ ಪಂದ್ಯದಲ್ಲಿ ಮೊದಲ ದಿನವೇ ವೇದಾಂತ್ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ದೆಹಲಿ ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ ಅವರು, 22.3 ಓವರ್‌ಗಳಲ್ಲಿ 5 ಮೇಡನ್ ಓವರ್‌ಗಳನ್ನು ಎಸೆದು ಕೇವಲ 88 ರನ್ ನೀಡಿ 7 ವಿಕೆಟ್ ಕಬಳಿಸಿದರು. ಪಂಜಾಬ್ ತಂಡದ ಒಟ್ಟು 10 ವಿಕೆಟ್‌ಗಳಲ್ಲಿ ಏಳು ವಿಕೆಟ್‌ಗಳನ್ನು ವೇದಾಂತ್ ಒಬ್ಬರೇ ಉರುಳಿಸಿದ್ದು ವಿಶೇಷ. ಉಳಿದಂತೆ ನಕುಲ್ ಯಾದವ್ 7 ಓವರ್‌ಗಳಲ್ಲಿ 25 ರನ್ ನೀಡಿ ಒಂದು ವಿಕೆಟ್ ಪಡೆದರು. ರಾಹುಲ್ ರಾಕೇಶ್ ಯಾದವ್ ಮತ್ತು ಅರ್ನವ್ ಬುಗ್ಗಾ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ವೇದಾಂತ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಅಂಡರ್-19 ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು. ಪಂಜಾಬ್ ಪರ ಸಹಿಜ್‌ಬೋತ್ವೀರ್ ಸಿಂಗ್ 116 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 61 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮತ್ತೊಂದೆಡೆ ನೂರ್ವೀರ್ ಸಿಂಗ್ 58 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 58 ರನ್ ಸಿಡಿಸಿದರು.
ಐಪಿಎಲ್ ಹರಾಜಿಗೆ ಸೆಹ್ವಾಗ್ ಪುತ್ರನ ಎಂಟ್ರಿ; ದ್ರಾವಿಡ್ ಮಗನ ಹೆಸರೇ ನಾಪತ್ತೆ
ಆರ್ಯವೀರ್ ಬ್ಯಾಟ್‌ನಿಂದ 31 ರನ್
ಪಂಜಾಬ್ ತಂಡದ 238 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದೆಹಲಿ ತಂಡ ಮೊದಲ ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಈ ಮೂಲಕ ದೆಹಲಿ ತಂಡ ಇನ್ನೂ 134 ರನ್‌ಗಳ ಹಿನ್ನಡೆಯಲ್ಲಿದ್ದು, ಕೈಯಲ್ಲಿ 8 ವಿಕೆಟ್‌ಗಳನ್ನು ಉಳಿಸಿಕೊಂಡಿದೆ. ಇನ್ನು ದೆಹಲಿ ತಂಡವನ್ನು ಮುನ್ನಡೆಸುತ್ತಿರುವ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ 31 ರನ್ ಗಳಿಸಿದರು. 94 ಎಸೆತಗಳನ್ನು ಎದುರಿಸಿದ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಇತ್ತೀಚೆಗೆ ನಡೆದ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಆರ್ಯವೀರ್ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರ ಕಿರಿಯ ಸಹೋದರ ವೇದಾಂತ್ ಬೌಲಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.

