ಬೆಂಗಳೂರು/ಮೈಸೂರು: ‘ಆಶಾ ಕಾರ್ಯಕರ್ತೆ ಯರ ಬೇಡಿಕೆ ಈಡೇರಿಕೆ ಸಂಬಂಧ ಯಾವುದೇ ರೀತಿಯ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ. ಸರ್ಕಾರವನ್ನು ಈ ರೀತಿ ಬ್ಲ್ಯಾಕ್‌ಮೇಲ್‌ ಮಾಡುವುದೂ ಸರಿಯಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಟ್ಟುನಿಟ್ಟಾಗಿ ಹೇಳಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಅವರು ಈ ವಿಷಯ ತಿಳಿಸಿದರು. ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಡಿ.ಕೆ.ಶಿವಕುಮಾರ್ ನಾಳೆ (ಶುಕ್ರವಾರ) ಆಶಾ ಕಾರ್ಯಕರ್ತೆಯರ ಸಭೆ ಕರೆದಿದ್ದಾರೆ.

‘ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಗುರುವಾರ ಬೆಳಿಗ್ಗೆ ಹೇಳಿದ್ದೆ. ಪ್ರತಿಭಟನೆ ಕೈಬಿಡಿ ಎಂದು ಮತ್ತೆ ಕೋರಿಕೊಂಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯ ಮೇಲೆಯೇ ನಂಬಿಕೆ ಇರದಿದ್ದರೆ ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಶಾ ಕಾರ್ಯಕರ್ತೆಯರ ಜತೆ ನಾನು ಮಾತನಾಡಿದ್ದೇನೆ. ಭರವಸೆ ಈಡೇರಿಸುತ್ತೇವೆ, ಪ್ರತಿಭಟನೆ ಕೈಬಿಡಿ ಎಂದು ಕೇಳಿಕೊಂಡಿದ್ದೇನೆ. ಹೀಗಿದ್ದೂ ಲಿಖಿತ ಭರವಸೆ ನೀಡಿ ಎಂದರೆ ಹೇಗಾಗುತ್ತದೆ? ಸರ್ಕಾರಕ್ಕೂ ಒಂದು ಮಿತಿ ಇದೆ. ಇವೆಲ್ಲಾ ಕೆಲಸಗಳು ನಂಬಿಕೆ ಮೇಲೆ ನಡೆಯುತ್ತವೆ’ ಎಂದರು.

ಗುರುವಾರ ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದು ಯಾವುದೇ ಒಪ್ಪಂದವಲ್ಲ. ಇನ್ನೂ 17 ಇಲಾಖೆಗಳ ನೌಕರರು ಇದೇ ರೀತಿಯ ಬೇಡಿಕೆ ಇಡುತ್ತಿದ್ದಾರೆ. ಒಬ್ಬರಿಗೆ ಲಿಖಿತ ಭರವಸೆ ನೀಡಿದರೆ, ಎಲ್ಲರಿಗೂ ನೀಡಬೇಕಾಗುತ್ತದೆ. ಆಶಾ ಕಾರ್ಯಕರ್ತೆಯರ ಬೇಡಿಕೆ ವಿಚಾರವನ್ನು ಸಚಿವ ಸಂಪುಟ ಸಭೆ ಮತ್ತು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದ್ದೇನೆ. ಹೀಗಾಗಿ ಆಶಾ ತಾಯಂದಿರು ಪ್ರತಿಭಟನೆ ಕೈಬಿಟ್ಟು, ಕೆಲಸಕ್ಕೆ ಮರಳಬೇಕು’ ಎಂದು ಕೇಳಿಕೊಂಡರು.

‘ರಾಜಕೀಯಕ್ಕೆ ಬಳಕೆ’: ‘ರಾಜ್ಯದ ಬೇರೆ–ಬೇರೆ ಭಾಗಗಳ ಹಲವು ಆಶಾ ಕಾರ್ಯಕರ್ತೆಯರು ನನಗೆ ಕರೆ ಮಾಡಿ, ‘ನಾವು ಕೆಲಸಕ್ಕೆ ಮರಳಲು ಸಿದ್ಧರಿದ್ದೇವೆ. ಆದರೆ ಸಂಘಟನೆಯವರು ನಮ್ಮನ್ನು ಬಿಡುತ್ತಿಲ್ಲ’ ಎಂಬ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಕೆಲವರು ‘ಆಶಾ’ ಪ್ರತಿಭಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಶಿವಕುಮಾರ್‌ ಆರೋಪಿಸಿದರು.

ಬೆಂಗಳೂರು, ಚನ್ನಪಟ್ಟಣ ಮತ್ತು ಮೈಸೂರು ಮೂರೂ ಕಡೆ ಈ ವಿಷಯ ಪ್ರಸ್ತಾಪಿಸಿದ ಅವರು, ‘ಪ್ರತಿಭಟನಾ ಸ್ಥಳಕ್ಕೆ ಹೋಗಿ ಬಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರ್ಕಾರವನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ? ಇವರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರದ ಜವಾಬ್ದಾರಿ ಇಲ್ಲವೇ. ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಬಳಿ ಏಕೆ ಲಿಖಿತ ಭರವಸೆ ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕೆಲವು ಸಿನಿಮಾ ತಾರೆಯರು ಅಲ್ಲಿಗೆ ಹೋಗಿ ಬೆಂಬಲ ಸೂಚಿಸುತ್ತಿದ್ದಾರೆ. ರಾಜಕಾರಣಿಗಳು ಅವರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರ‍್ಯಾರಿಂದಲೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆ ಸತ್ಯವನ್ನು ಪ್ರತಿಭಟನೆನಿರತರು ಅರ್ಥಮಾಡಿಕೊಳ್ಳಬೇಕು’ ಎಂದು ಕೋರಿದರು.

‘ಒಂದು ಸರ್ಕಾರವಾಗಿ ಎಷ್ಟು ಗೌರವ ಕೊಡಬೇಕೊ ಅವರಿಗೆ ಅಷ್ಟು ಕೊಡಲಾಗಿದೆ. ಅವರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿಯಿದೆ. ಅವರ ಹೋರಾಟ, ನೋವು ಗೊತ್ತಾಗಿದೆ. ಆದರೂ ಸರ್ಕಾರವನ್ನು ಹೆದರಿಸುತ್ತೇನೆ ಎನ್ನುವ ಭಾವನೆ ಅವರಲ್ಲಿ ಬರಬಾರದು. ಕೆಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರೇ ಇಲ್ಲ’ ಎಂದು ಶಿವಕುಮಾರ್ ಕೊಪ್ಪಳದಲ್ಲಿ ಹೇಳಿದರು.

‘ಆಶಾ ಇಲ್ಲದಿದ್ದರೂ ಸೇವೆಗೆ ಸಮಸ್ಯೆ ಆಗಿಲ್ಲ’

‘ಆಶಾ ಕಾರ್ಯಕರ್ತೆಯರು ಕರ್ತವ್ಯಕ್ಕೆ ಹಾಜರಾಗದಿದ್ದರೂ ಆರೋಗ್ಯ ಇಲಾಖೆಯ ಸೇವೆಗಳು ಎಂದಿನಂತೆ ನಡೆಯುತ್ತಿವೆ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ಕೆಲಸ ಮಾಡಿಲ್ಲ. ಅವರ ಅನುಪಸ್ಥಿತಿಯಲ್ಲೂ ಆಸ್ಪತ್ರೆಗಳಲ್ಲಿ ಹೆರಿಗೆ ಸೇರಿದಂತೆ ಇತರ ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.

ಸಿಎಂ ಜತೆ ಮಾತುಕತೆ ಇಂದು

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸಭೆ ನಡೆಸಲಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಯ ಪ್ರಧಾನ ಸಲಹೆಗಾರ ಜಿ.ಸಿ.ಚಂದ್ರಶೇಖರ್ ಅವರು ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತುಕತೆ ನಡೆಸಿದರು.

ತಿಂಗಳಿಗೆ ₹15 ಸಾವಿರ ಗೌರವಧನ ನೀಡಬೇಕು. ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ₹5 ಲಕ್ಷ ಇಡುಗಂಟು ಮಂಜೂರು ಮಾಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಇದೇ ವೇಳೆ ಆಗ್ರಹಿಸಿದರು.

ಹೋರಾಟಕ್ಕೆ ಬರಗೂರು ಬೆಂಬಲ

ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಮಳೆ-ಚಳಿ ನಡುವೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಹೋರಾಟ ಆಶಾ ಕಾರ್ಯಕರ್ತೆಯರ ಬದ್ಧತೆಗೆ ಜ್ವಲಂತ ಸಾಕ್ಷಿಯಾಗಿದೆ. ಇಂದಿನ ದಿನಗಳಲ್ಲಿ ಯಾವುದೇ ಸರ್ಕಾರದ ಮೌಖಿಕ ಆಶ್ವಾಸನೆಯನ್ನು ನಂಬುವ ಸ್ಥಿತಿ ಇಲ್ಲವಾದ್ದರಿಂದ, ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಲಿಖಿತ ರೂಪದಲ್ಲಿ ಕೊಡಬೇಕೆಂದು ಹೋರಾಟಗಾರರು ಒತ್ತಾಯಿಸಿರುವುದು ಸಮರ್ಥನೀಯ’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಪರಸ್ಪರ ಮಾತುಕತೆ- ಸಂವಾದ ಮುಖ್ಯ. ಜಪಾನ್‌ನಿಂದಲೇ ಮನವಿ ಮಾಡಿದ್ದ ಮುಖ್ಯಮಂತ್ರಿ ಅವರು ಈಗ ರಾಜ್ಯಕ್ಕೆ ಮರಳಿದ್ದು, ಕೂಡಲೇ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕು. ಪಕ್ಷ ರಾಜಕೀಯಕ್ಕೆ ಅವಕಾಶ ಕೊಡದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸ್ಪಂದಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರತಿಭಟನೆ ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸಬೇಕಿತ್ತು’

‘ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅವರು ಜಪಾನ್‌ನಿಂದ ವಿಡಿಯೊ ಕರೆ ಮಾಡುವ ಬದಲು, ಬೆಂಗಳೂರಿಗೆ ಬಂದಾಗ ನೇರವಾಗಿ ಪ್ರತಿಭಟನರ ಸ್ಥಳಕ್ಕೆ ಹೋಗಿ ಸಮಸ್ಯೆಗಳನ್ನು ಕೇಳಿಸಿಕೊಳ್ಳಬಹುದಿತ್ತು. ಅವರು ಹಾಗೆ ಮಾಡಲಿಲ್ಲ. ಈ ಸರ್ಕಾರದ ಆಡಳಿತ ವೈಖರಿ ಜನವಿರೋಧಿಯಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಶಾ ಕಾರ್ಯಕರ್ತೆಯರು, ಅವರ ಮುಂದಾಳುಗಳು ಪ್ರತಿಷ್ಠೆಯನ್ನು ಬದಿಗಿಡಬೇಕು. ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುತ್ತದೆ. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಬೇಕು ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

261127-51-2128498189