ಬೆಂಗಳೂರು: ‘ಈ ಬಾರಿ ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿರುವ ಕಾರಣ, ಗ್ರಾಮೀಣ ಅಕುಶಲ ಬಡ ಕಾರ್ಮಿಕರಿಗೆ ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ 175 ದಿನ ಉದ್ಯೋಗ ನೀಡಲು ಅವಕಾಶವಾಗುವಂತೆ ಕೆಲಸದ ಮಿತಿಯನ್ನು 50 ದಿನ ಹೆಚ್ಚಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆಯ ಅಂಕಿಅಂಶಗಳ ಸಹಿತ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಖಂಡ್ರೆ, ‘ಜನ ಗುಳೆ ಹೋಗದಂತೆ ತಪ್ಪಿಸಲು ಭೂರಹಿತ ಕೂಲಿ ಕಾರ್ಮಿಕರಿಗೆ, ದುರ್ಬಲರಿಗೆ, ಗ್ರಾಮೀಣ ಬಡಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
‘2.83 ಕೋಟಿ ಮಾನವ ದಿನ ಸೃಜನೆ’
‘ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಜುಲೈ 1ರಿಂದ ಇಲ್ಲಿಯವರೆಗೆ 2.83 ಕೋಟಿ ಮಾನವ ದಿನ ಸೃಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 35ರಷ್ಟು ಹೆಚ್ಚು’ ಎಂದು ಖಂಡ್ರೆ ಹೇಳಿದ್ದಾರೆ.
‘ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೇಂದ್ರ ಸರ್ಕಾರ ಶೇ 90ರಷ್ಟು ವೆಚ್ಚ ಭರಿಸುತ್ತಿತ್ತು. ರಾಜ್ಯ ಸರ್ಕಾರ ಕೇವಲ ಶೇ 10 ವೆಚ್ಚ ಭರಿಸುತ್ತಿತ್ತು. ಆದರೆ, ಹೊಸ ಯೋಜನೆಯಲ್ಲಿ 60:40 ಅನುಪಾತ ನಿಗದಿಪಡಿಸಲಾಗಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಆದರೂ ಗ್ರಾಮೀಣ ಬಡವರು, ದುರ್ಬಲರು, ವಂಚಿತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪಸಂಖ್ಯಾತ ಭೂರಹಿತ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದೆ’ ಎಂದಿದ್ದಾರೆ.
261127-4-829231420

