ಬೆಂಗಳೂರು: ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ತಂತ್ರಾಂಶಗಳ ಬದಲಾವಣೆ ಕಾರ್ಯ ನಡೆಯುತ್ತಿರುವುದರಿಂದ, ಅನ್ನಭಾಗ್ಯದ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾಗಿದೆ. ತಿಂಗಳಾಂತ್ಯದೊಳಗೆ ಎಲ್ಲ ಫಲಾನುಭವಿಗಳಿಗೆ ಪಡಿತರ ವಿತರಿಸುವ ಸಲುವಾಗಿ ಬೆಳಿಗ್ಗೆ 6 ರಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ 1.25 ಕೋಟಿ ಫಲಾನುಭವಿಗಳು ಇದ್ದು, ಪಡಿತರ ಪಡೆದುಕೊಳ್ಳುವುದಕ್ಕೂ ಮುನ್ನ ‘ಆಹಾರ’ ತಂತ್ರಾಂಶದಲ್ಲಿ ತಮ್ಮ ಬಯೊಮೆಟ್ರಿಕ್‌ ಅನ್ನು ದೃಢೀಕರಿಸಬೇಕು. ಬಯೊಮೆಟ್ರಿಕ್‌ ದತ್ತಾಂಶವಿರುವ ಎರಡು ಸರ್ವರ್‌ಗಳ ಸಂಯೋಜನೆ, ಆಧಾರ್‌ ವಿವರ ಸಂಯೋಜನೆಗೆ ತಂತ್ರಾಂಶ ಬದಲಾವಣೆ, ಬಯೊಮೆಟ್ರಿಕ್‌ ಸ್ಕ್ಯಾನರ್‌ಗಳ ತಂತ್ರಾಂಶ ಬದಲಾವಣೆ ಕಾರ್ಯವು ಇದೇ 23ರಿಂದ ಆರಂಭವಾಗಿದೆ.

ಈ ಎಲ್ಲವೂ ಒಟ್ಟಿಗೆ ನಡೆಯುತ್ತಿದ್ದ ಕಾರಣಕ್ಕೆ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ 23 ಮತ್ತು 24ರಂದು ಫಲಾನುಭವಿಗಳು ತಮ್ಮ ಬಯೊಮೆಟ್ರಿಕ್‌ ಖಚಿತಪಡಿಸಲು ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ವರದಿಯಾಗಿತ್ತು. ಈ ವಿಳಂಬದ ಕಾರಣಕ್ಕೆ ನವೆಂಬರ್ 24ರ ಸಂಜೆ ವೇಳೆಗೆ ಶೇ 53ರಷ್ಟು ಫಲಾನುಭವಿಗಳಿಗೆ ಮಾತ್ರವೇ ಪಡಿತರ ವಿತರಣೆ ಸಾಧ್ಯವಾಗಿತ್ತು. ವಿಳಂಬಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

‘ಈ ಕುರಿತು ಮುಖ್ಯಮಂತ್ರಿ ಕಚೇರಿಯು ಆಹಾರ ಇಲಾಖೆಗೆ ಪತ್ರ ಬರೆದು, ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿತ್ತು. ಅದರ ಬೆನ್ನಲ್ಲೇ, ಈ ತಂತ್ರಾಂಶ ನಿರ್ವಹಣೆ ಮಾಡುವ ಕೇಂದ್ರ ಸರ್ಕಾರದ ಎನ್‌ಐಸಿಗೆ ಪತ್ರ ಬರೆಯಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಳಕೆಯಲ್ಲಿರುವ ವಿಂಡೋಸ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಡೆಸ್ಕ್‌ಟಾಪ್‌ ಮತ್ತು ಸ್ಕ್ಯಾನರ್‌ ಸಂಯೋಜನೆಗೆ ಹೊಸ ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಹೊಸ ತಂತ್ರಾಂಶ ಅಳವಡಿಕೆ ನಂತರ ಬಯೊಮೆಟ್ರಿಕ್‌ ದೃಢೀಕರಣ ಸರಾಗವಾಗಿದೆ. ಮಂಗಳವಾರ ಸಂಜೆ ವೇಳೆಗೆ ಬೆಂಗಳೂರು, ಮೈಸೂರು, ಕಲಬುರ್ಗಿ ಜಿಲ್ಲಾ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿದಿದೆ. ಉಳಿದೆಡೆ ತಂತ್ರಾಂಶ ಅಳವಡಿಕೆ ಕಾರ್ಯ ನಡೆಯುತ್ತಿದೆ’ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ನವೆಂಬರ್‌ 25ರ ಬುಧವಾರದಿಂದಲೇ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಪರಿಣಾಮವಾಗಿ ಫಲಾನುಭವಿಗಳು ತಮ್ಮ ಕೆಲಸದ ಅವಧಿಯನ್ನು ಹೊರತುಪಡಿಸಿ, ಬಿಡುವಿನ ವೇಳೆಯಲ್ಲಿ ಬಯೊಮೆಟ್ರಿಕ್‌ ದೃಢೀಕರಣ ಮಾಡಲು ಸಾಧ್ಯವಾಗಿದೆ’ ಎಂದು ವಿವರಿಸಿದರು.

ಇನ್ನೂ ಹಲವು ಜಿಲ್ಲೆಗಳಲ್ಲಿ ತಂತ್ರಾಂಶ ಅಳವಡಿಕೆ ಪೂರ್ಣಗೊಳ್ಳದ ಕಾರಣ, ಬಯೊಮೆಟ್ರಿಕ್‌ ದೃಢೀಕರಣದಲ್ಲಿ ವಿಳಂಬವಾಗುತ್ತಲೇ ಇದೆ.

261127-51-92509002