ಬೆಂಗಳೂರು: ‘ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಸುರಕ್ಷಿತ ಆಹಾರ ಮತ್ತು ಗುಣಮಟ್ಟದ ಔಷಧಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅದನ್ನು ಖಚಿತಪಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿರಬೇಕು’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಆಹಾರ ಪದಾರ್ಥಗಳು ಮತ್ತು ಔಷಧಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಬರಾಜಾಗುವುದರಿಂದ, ನಿಯಂತ್ರಣಾ ಸವಾಲುಗಳನ್ನು ಯಾವುದೇ ಒಂದು ರಾಜ್ಯ ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಬಲವಾದ ಅಂತರರಾಜ್ಯ ಸಮನ್ವಯ, ನೈಜ ಸಮಯದ ಮಾಹಿತಿ ವಿನಿಮಯ, ಏಕರೂಪದ ಮಾನದಂಡಗಳು ಮತ್ತು ಸ್ಪಷ್ಟವಾದ ರಾಷ್ಟ್ರೀಯ ಮಾರ್ಗಸೂಚಿಗಳ ಅಗತ್ಯವಿದೆ’ ಎಂದು ಅವರು ಹೇಳಿದರು.

‘ಆಹಾರ ಹಾಗೂ ಔಷಧಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನಕಲಿ ಔಷಧಗಳು, ಆಹಾರ ಕಲಬೆರಕೆ ಮತ್ತು ಇತರ ಗಂಭೀರ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸ ಲಾಗಿದೆ. ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧ ಜಾಲ ಮತ್ತು ₹18 ಕೋಟಿಗೂ ಅಧಿಕ ಹಣಕಾಸು ವಹಿವಾಟಿನ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಇದು ಕಟ್ಟುನಿಟ್ಟಿನ ಕ್ರಮ ಮತ್ತು ಸಂಘಟಿತ ಕಾರ್ಯಾಚರಣೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ’ ಎಂದರು.

‘ಕ್ಯೂಆರ್ ಕೋಡ್ ಆಧಾರಿತ ದೂರು ವ್ಯವಸ್ಥೆಯು ಆಹಾರ ಸುರಕ್ಷತಾ ಉಲ್ಲಂಘನೆಗಳ ಬಗ್ಗೆ ಫೋಟೋ ಸಹಿತ ನೇರವಾಗಿ ಕ್ಷೇತ್ರ ಅಧಿಕಾರಿಗಳಿಗೆ ದೂರು ನೀಡಲು ಅನುವು ಮಾಡಿಕೊಡುತ್ತದೆ. ಇದರಿಂದ ತಕ್ಷಣದ ತಪಾಸಣೆ ಮತ್ತು ಮುಂದಿನ ಕ್ರಮ ಸಾಧ್ಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತಕ್ಕೆ ಸಂಬಂಧಿಸಿದ ಕೈಪಿಡಿ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ ಉಪಸ್ಥಿತರಿದ್ದರು.

‘ಕ್ರಮಕ್ಕೆ ಅಧಿಕಾರ ಅಗತ್ಯ’

‘ಮರುಬಳಕೆ ಮಾಡಿದ ಅಡುಗೆ ಎಣ್ಣೆ, ಆಹಾರದ ಗುಣಮಟ್ಟ, ರಫ್ತು ಮತ್ತು ಕಳಪೆ ಗುಣಮಟ್ಟದ ಔಷಧಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸ್ಪಷ್ಟ ಮಾರ್ಗಸೂಚಿಗಳು, ರಾಜ್ಯ ಮತ್ತು ಕೇಂದ್ರ ಪ್ರಾಧಿಕಾರಗಳ ನಡುವೆ ಉತ್ತಮ ಸಮನ್ವಯ ಇರಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಪಾಯ ಎದುರಾದಾಗ ಸಕಾಲದಲ್ಲಿ ಕ್ರಮ ಕೈಗೊಳ್ಳಲು ರಾಜ್ಯಗಳಿಗೂ ಅಗತ್ಯ ಅಧಿಕಾರ ಇರಬೇಕು’ ಎಂದು ಯು.ಟಿ. ಖಾದರ್ ಹೇಳಿದರು.

ಇತರ ರಾಜ್ಯಗಳಿಗೂ ಮಾದರಿ ಯಾಗುವಂತಹ ಬಲಿಷ್ಠ, ಪಾರದರ್ಶಕ ಹಾಗೂ ಜನಪರ ಆಹಾರ ಮತ್ತು ಔಷಧ ಸುರಕ್ಷತಾ ನಿಯಂತ್ರಣ ವ್ಯವಸ್ಥೆ ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ

ಯು.ಟಿ. ಖಾದರ್, ಆರೋಗ್ಯ ಸಚಿವ

261127-4-903650087