ಬೆಂಗಳೂರು: ಗ್ರಾಹಕರಿಂದ ₹1,305 ಕೋಟಿ ಸಂಗ್ರಹಿಸಿ, ಫ್ಲ್ಯಾಟ್‌ ನೀಡದೆ ವಂಚಿಸಿದ ಪ್ರಕರಣದಲ್ಲಿ ಓಝೋನ್‌ ಅರ್ಬಾನಾ ಇನ್‌ಫ್ರಾ ಡೆವಲಪರ್ಸ್‌ಗೆ ಸೇರಿದ ₹702.70 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಕಂಪನಿಯ ಪ್ರವರ್ತಕ ಎಸ್‌.ವಾಸುದೇವನ್‌ ಅವರಿಗೆ ಸೇರಿದ ಸ್ವತ್ತುಗಳನ್ನೂ ಇದು ಒಳಗೊಂಡಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಓಝೋನ್‌ ಅರ್ಬಾನಾ ಡೆವಲಪರ್ಸ್‌ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದೆ. 2015–16ರ ವೇಳೆ ಸಾವಿರಾರು ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿತ್ತು.

2018ರ ಅಂತ್ಯದ ವೇಳೆಗೆ ಗ್ರಾಹಕರಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಬೇಕಿತ್ತು. ಆದರೆ 2024ರ ವೇಳೆಗೆ ಶೇ 49ರಷ್ಟು ಫ್ಲ್ಯಾಟ್‌ಗಳು ಮಾತ್ರ ಪೂರ್ಣವಾಗಿದ್ದವು. ಕಂಪನಿಯ ವಿರುದ್ಧ ಗ್ರಾಹಕರು ಹಲವು ದೂರುಗಳನ್ನು ನೀಡಿದ್ದರು. ಆ ದೂರುಗಳ ಆಧಾರದಲ್ಲಿ ಇ.ಡಿ ತನಿಖೆ ಆರಂಭಿಸಿತ್ತು. ಇದೇ ಆಗಸ್ಟ್ 10ರಂದು ದೇಶದ ಹಲವೆಡೆ ಶೋಧ ಕಾರ್ಯ ನಡೆಸಿತ್ತು.

‘ಗ್ರಾಹಕರಿಂದ ಪಡೆದ ಠೇವಣಿ, ಫ್ಲ್ಯಾಟ್‌ಗಳ ಮೇಲೆ ಪಡೆದ ಸಾಲದ ಮೊತ್ತ ಎಲ್ಲವನ್ನೂ ವಾಸುದೇವನ್‌ ಅವರು ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ವಂಚನೆಯ ಉದ್ದೇಶದಿಂದಲೇ ಹೀಗೆ ಮಾಡಿದ್ದರು. ಆ ಹಣವನ್ನು ಬಳಸಿಕೊಂಡು ಬೆಂಗಳೂರು, ಮುಂಬೈನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿದ್ದರು. ಇತರೆಡೆ ಹೂಡಿಕೆ ಮಾಡಿದ್ದರು’ ಎಂದು ಇ.ಡಿ ತಿಳಿಸಿದೆ.

‘ಈ ಹಿಂದೆ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ₹423.7 ಕೋಟಿಯ ಆಸ್ತಿಗಳೂ ಸೇರಿ, ಒಟ್ಟು ₹1,126.40 ಕೋಟಿ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಬೆಂಗಳೂರು, ದೇವನಹಳ್ಳಿ, ಮುಂಬೈನಲ್ಲಿರುವ ಸ್ಥಿರಾಸ್ತಿಗಳನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಾಣಿಜ್ಯ ಸಂಕೀರ್ಣ, ನಿರ್ಮಾಣ ಹಂತದ ವಸತಿ ಸಮುಚ್ಚಯ, ನಿವೇಶನ ಮತ್ತು ವಿಲ್ಲಾಗಳು ಇದರಲ್ಲಿ ಸೇರಿವೆ’ ಎಂದಿವೆ.

‘ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ನಂತರ, ವಂಚನೆಗೆ ಒಳಗಾದ ಗ್ರಾಹಕರಿಗೆ ಅವರ ಹಣ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಇ.ಡಿ ಮೂಲಗಳು ತಿಳಿಸಿವೆ.